ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಚಿಂತನೆ: ಶೋಭಾ ಕರಂದ್ಲಾಜೆ

Update: 2022-09-30 15:24 GMT

ಉಡುಪಿ, ಸೆ.30: ರಾಜ್ಯದಲ್ಲಿನ ಎಲ್ಲಾ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ ಸಿದ್ದವಿದ್ದು, ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

355.72 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಾಷ್ಟ್ರೀಯ ಹೆದ್ದಾರಿ 169ಎ ಹೆಬ್ರಿ-ಪರ್ಕಳ-ಕರಾವಳಿ ಬೈಪಾಸ್-ಮಲ್ಪೆಚತುಷ್ಪಥ ರಸ್ತೆ ಕಾಮಗಾರಿಗೆ ಪೆರ್ಡೂರಿನಲ್ಲಿ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.ಕರ್ನಾಟಕದಲ್ಲಿನ ಎಲ್ಲಾ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರವು ಎಲ್ಲಾ ರೀತಿಯ ಅರ್ಥಿಕ ನೆರವು ನೀಡಲು ಸಿದ್ದವಿದೆ. ರಸ್ತೆ ಕಾಮಗಾರಿ ಕಾರ್ಯಕ್ಕೆ ಭೂ ಸ್ವಾಧೀನ ಪ್ರಕ್ರಿಯೆಲ್ಲಿನ ವಿಳಂಬದಿಂದ ತೊಡಕು ಉಂಟಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಪ್ರಸ್ತುತ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 169ಎ ಹೆಬ್ರಿ- ಪರ್ಕಳ-ಕರಾವಳಿ ಬೈಪಾಸ್-ಮಲ್ಪೆಚತುಷ್ಪಥ ರಸ್ತೆ ಕಾಮಗಾರಿಯು 2 ವರ್ಷದಲ್ಲಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಈ ಹೆದ್ದಾರಿಯಲ್ಲಿ ಯಾವುದೇ ಟೋಲ್ ಗೇಟ್ಗಳು ಇರುವುದಿಲ್ಲ. ಕರಾವಳಿ ಜಿಲ್ಲೆಗಳನ್ನು ಇತರೆ ಜಿಲ್ಲೆಗಳೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ ಎಂದು ಅವರು ಹೇಳಿದರು.

ಈ ಚತುಷ್ಪಥ ಕಾಮಗಾರಿಯಲ್ಲಿ ಮಲ್ಪೆಯ ರಸ್ತೆ ಅಗಲೀಕರಣದಿಂದ ಜಿಲ್ಲೆಯ ಮೀನುಗಾರಿಕೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಲಿದ್ದು, ಮಣಿಪಾಲದಲ್ಲಿನ ಆರೋಗ್ಯ ಸೇವೆಯ ದೃಷ್ಠಿಯಿಂದ ಈ ರಸ್ತೆ ಅಭಿವದ್ಧಿ ಅತ್ಯಂತ ಅಗತ್ಯವಿದ್ದು, ಈಗಾಗಲೇ ಪರ್ಕಳದಿಂದ ಉಡುಪಿವರೆಗಿನ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೆಬ್ರಿಯಿಂದ ಆಗುಂಬೆವರೆಗಿನ ರಸ್ತೆ ಅಭಿವೃಧ್ದಿಗೆ ಸಹ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ವಿವಿಧ ಗ್ರಾಮ ಪಂಚಾಯತ್ಗಳ ಅಧ್ಯಕ್ಷರು , ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News