ಉವೈಸಿ ಕಾರಿಗೆ ಗುಂಡು ಹಾರಿಸಿದವರಿಗೆ ಜಾಮೀನು ಪ್ರಶ್ನಿಸಿ ಮನವಿ: ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂ ನೋಟಿಸ್

Update: 2022-09-30 16:38 GMT

ಹೊಸದಿಲ್ಲಿ, ಸೆ. 30: ಈ ವರ್ಷದ ಫೆಬ್ರವರಿ ತಿಂಗಳಲ್ಲಿ ತನ್ನ ವಾಹನದ ಮೇಲೆ ಗುಂಡು ಹಾರಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಎಐಎಮ್ಐಎಮ್ ಅಧ್ಯಕ್ಷ ಅಸದುದ್ದೀನ್ ಉವೈಸಿ ಸಲ್ಲಿಸಿರುವ ಮನವಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಆರೋಪಿಗಳಾದ ಸಚಿನ್ ಶರ್ಮ ಮತ್ತು ಶುಭಮ್ ಗುರ್ಜರ್ಗೆ ಜಾಮೀನಿ ನೀಡಿರುವುದಕ್ಕೆ ಸಂಬಂಧಿಸಿದ ವಿಷಯವನ್ನು ಮರುಪರಿಶೀಲನೆಗಾಗಿ ಅಲಹಾಬಾದ್ ಹೈಕೋರ್ಟ್ ಗೆ ಕಳುಹಿಸಬೇಕೇ ಎಂಬ ಬಗ್ಗೆ ಪ್ರತಿಕ್ರಿಯೆ ಕೋರಿ ನ್ಯಾಯಮೂರ್ತಿಗಳಾದ ಎಮ್.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವೊಂದು ಉತ್ತರಪ್ರದೇಶ ಸರಕಾರ ಮತ್ತು ಇಬ್ಬರು ಆರೋಪಿಗಳಿಗೆ ನೋಟಿಸ್ಗಳನ್ನು ನೋಡಿತು.

ಮೂರನೇ ಆರೋಪಿ ಆಲಿಮ್ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿತು.

‘‘ಈ ಪ್ರಕರಣದಲ್ಲಿ ಆಲಿಮ್ನ ಪಾತ್ರದ ಬಗ್ಗೆ ಹೇಳುವುದಾದರೆ, ಘಟನೆ ನಡೆಯುವುದಕ್ಕಿಂತ ಆರು ತಿಂಗಳ ಮೊದಲು ಆತ ಇತರ ಆರೋಪಿಗಳಿಗೆ ಪಿಸ್ತೂಲೊಂದನ್ನು ಪೂರೈಸಿದ್ದ ಹಾಗೂ ಗುಂಡು ಹಾರಾಟದ ಘಟನೆಯಲ್ಲಿ ಆತನ ಪಾತ್ರವನ್ನು ಸೂಚಿಸಲಾಗಿಲ್ಲ. ಹಾಗಾಗಿ, ಆತನಿಗೆ ಜಾಮೀನು ನೀಡಿರುವ ಅಲಹಾಬಾದ್ ಹೈಕೋರ್ಟ್ನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣಗಳಿಲ್ಲ. ಹಾಗಾಗಿ, ಅಲೀಮ್ನ ಜಾಮೀನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಲಾಗಿದೆ’’ ಎಂದು ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News