ಅಮೆರಿಕ ವೀಸಾ ಪಡೆಯುವ ಸಮಯದಲ್ಲಿ ಭಾರೀ ವ್ಯತ್ಯಾಸ: ಭಾರತೀಯರು 2 ವರ್ಷ ಕಾಯಬೇಕಿದ್ದರೆ, ಚೀನಾದವರಿಗೆ 2 ದಿನ !

Update: 2022-09-30 17:46 GMT

ವಾಷಿಂಗ್ಟನ್, ಸೆ.30: ಅಮೆರಿಕದ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಭಾರತೀಯರು ವೀಸಾ ಪಡೆಯಲು 2 ವರ್ಷ ಕಾಯಬೇಕಿದ್ದರೆ, ಚೀನಾದ ಪ್ರಜೆಗಳಿಗೆ 2 ದಿನದಲ್ಲಿ ದೊರಕುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ   ವೆಬ್ಸೈಟ್ ವರದಿ ಮಾಡಿದೆ.

ವೀಸಾಕ್ಕೆ ಅರ್ಜಿ ಸಲ್ಲಿಸಿದವರು ತಾವು ತೆರಳಬೇಕಿರುವ ದೇಶದ ರಾಯಭಾರ ಕಚೇರಿಯಿಂದ ವೀಸಾ ಅಪಾಯಿಂಟ್ಮೆಂಟ್(ಭೇಟಿಯ ಸಮಯದ ಕರೆ)ಗಾಗಿ ಕಾಯುವ ಸಮಯದಲ್ಲಿ ವ್ಯತ್ಯಾಸವಿದೆ. ದಿಲ್ಲಿಯ ನಿವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಿದರೆ ಕಾಯುವ ಅವಧಿ 833 ದಿನಗಳಾಗಿದ್ದರೆ, ಮುಂಬೈ ನಿವಾಸಿಗಳಿಗೆ 848 ದಿನಗಳು. ಆದರೆ ಚೀನಾದ ಬೀಜಿಂಗ್ ಪ್ರಜೆಗಳಿಗೆ ಕೇವಲ 2 ದಿನಗಳಾಗಿವೆ ಎಂದು ವೆಬ್ಸೈಟ್ ವರದಿ ತಿಳಿಸಿದೆ. 

ವಿದ್ಯಾರ್ಥಿ ವೀಸಾ ಪಡೆಯಲು ಕಾಯುವಿಕೆಯ ಅವಧಿ ದಿಲ್ಲಿ ಮತ್ತು ಮುಂಬೈ ನಿವಾಸಿಗಳಿಗೆ 430 ದಿನಗಳಾಗಿದ್ದರೆ, ಚೀನಾದ ಬೀಜಿಂಗ್ ನ ವಿದ್ಯಾರ್ಥಿಗಳಿಗೆ 1 ದಿನ, ಪಾಕಿಸ್ತಾನದ ಇಸ್ಲಮಾಬಾದ್ ವಿದ್ಯಾರ್ಥಿಗಳಿಗೆ ಕೇವಲ 2 ದಿನ. ಇತರ ಎಲ್ಲಾ  ವಲಸೇತರ ವೀಸಾಗಳಿಗಾಗಿ ದಿಲ್ಲಿಯ ಅರ್ಜಿದಾರರು 390 ದಿನ, ಮುಂಬೈಯ ಅರ್ಜಿದಾರರು 392 ದಿನ ಕಾಯಬೇಕು. ಆದರೆ ಬೀಜಿಂಗ್ನ ಅರ್ಜಿದಾರರು ಕಾಯುವ ಸಮಯ 2 ದಿನ, ಇಸ್ಲಮಾಬಾದ್ನ ಅರ್ಜಿದಾರರು 1 ದಿನ. ಕೆನಡಾದ ವಿದ್ಯಾರ್ಥಿ ವೀಸಾ ಪಡೆಯಲು ಭಾರತದ ವಿದ್ಯಾರ್ಥಿಗಳು 13 ವಾರ ಕಾಯಬೇಕು. ಆದರೆ ಸಂದರ್ಶಕರ ವೀಸಾ ಪಡೆಯಲು ಭಾರತೀಯರು   134 ದಿನಗಳು, ಪಾಕಿಸ್ತಾನೀಯರು 145 ದಿನ ಕಾಯಬೇಕಾಗುತ್ತದೆ. ಆದರೆ ಚೀನಾದವರಿಗೆ ಕೇವಲ 51 ದಿನಗಳಲ್ಲಿ ಸಂದರ್ಶಕರ ವೀಸಾ ದೊರಕುತ್ತದೆ.

ಸಮಯದ ವ್ಯತ್ಯಾಸದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಕಾನ್ಸುಲ್ ವ್ಯವಹಾರಗಳ ಸಚಿವ ಸಲಹೆಗಾರ ಡಾನ್ ಹೆಫ್ಲಿನ್, ವೀಸಾಕ್ಕೆ ಕಾಯುವ ಸಮಯದ ಬಗ್ಗೆ ನಿಮ್ಮಲ್ಲಿ ಕೆಲವರಿಗೆ ಆಕ್ಷೇಪವಿದೆ ಎಂಬುದು ನನಗೆ ತಿಳಿದಿದೆ. ಕಾಯುವಿಕೆ ಅವಧಿ ದೀರ್ಘವಾಗಿದೆ ಎಂದು ಪ್ರಾಮಾಣಿಕವಾಗಿ ಹೇಳಬೇಕಾಗಿದೆ. ಕೋವಿಡ್ನಿಂದ ನಮ್ಮ ಚೇತರಿಕೆ ಮತ್ತು ಕೋವಿಡ್ ನಂತರದ ಅವಧಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿ ಶುಭ ಸಮಾಚಾರವೆಂದರೆ, ಸಿಬಂದಿಗಳ ಕೊರತೆಯನ್ನು ನಿವಾರಿಸಲಾಗಿದೆ. ಕೋವಿಡ್ ಸಮಸ್ಯೆ ಉಲ್ಬಣಗೊಂಡಿದ್ದಾಗ ಮತ್ತು ಆ ಬಳಿಕದ ಕೆಲ ಸಮಯ ವೀಸಾ ಕಾನ್ಸುಲೇಟ್ಗಳಲ್ಲಿ ಕೇವಲ 50% ಸಿಬಂದಿಗಳೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿತ್ತು. 

ವಿಶ್ವದಾದ್ಯಂತದ ನಮ್ಮ ಕೆಲವು ಬೃಹತ್ ರಾಯಭಾರಿ ಕಚೇರಿಗಳಲ್ಲೂ ಪ್ರತೀ ವರ್ಷ ಅಗಾಧ ಪ್ರಮಾಣದಲ್ಲಿ ವೀಸಾ ಅರ್ಜಿ ಸಲ್ಲಿಕೆಯಾಗುತ್ತಿದೆ ಮತ್ತು ಇಲ್ಲಿಯೂ ಇದೇ ರೀತಿಯ ಸಮಸ್ಯೆಯಿದೆ. ಆದರೆ ಮುಂದಿನ ವರ್ಷ ಪೂರ್ಣಪ್ರಮಾಣದ ಸಿಬಂದಿಯೊಂದಿಗೆ ಕಾರ್ಯ ನಿರ್ವಹಿಸಲಾಗುವುದು ಎಂದವರು ಹೇಳಿದ್ದಾರೆ. ಈ ಮಧ್ಯೆ, ವೀಸಾ ಕೇಂದ್ರಗಳಲ್ಲಿ ಎಲ್ಲಾ ವಿಭಾಗದ ಸಿಬಂದಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿಯ ಹೇಳಿಕೆ ತಿಳಿಸಿದೆ. 

ಅಮೆರಿಕದ ವಿವರಣೆ 

ಸಮಯದ ವ್ಯತ್ಯಾಸದ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆ ವಿವರಣೆ ನೀಡಿದ್ದು, ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಸಂದರ್ಶನದ ಅಪಾಯಿಂಟ್ಮೆಂಟ್ ಸ್ವೀಕರಿಸಲು ಅಂದಾಜು ಕಾಯುವ ಸಮಯವು, ಆಯಾ ರಾಯಭಾರ ಕಚೇರಿಯ ಕೆಲಸದ ಹೊರೆ ಮತ್ತು ಸಿಬಂದಿಗಳ ಸಂಖ್ಯೆಯನ್ನು ಅವಲಂಬಿಸಿದೆ ಎಂದು ಹೇಳಿದೆ.

ವೀಸಾ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಈ ಸಮಸ್ಯೆ ತಲೆದೋರಿದೆ. ಇದನ್ನು ಶೀಘ್ರ ಪರಿಹರಿಸಲಾಗುವುದು. ಮುಂದಿನ ವರ್ಷದಿಂದ 100% ಸಿಬಂದಿಗಳನ್ನು ನೇಮಿಸಲಾಗುವುದು ಎಂದು ಅಮೆರಿಕದ ಕಾನ್ಸುಲ್ ವ್ಯವಹಾರಗಳ ಸಚಿವ ಸಲಹೆಗಾರ ಡಾನ್ ಹೆಫ್ಲಿನ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News