ಮಾಂಸಹಾರ ಒಳ್ಳೆಯದಲ್ಲ, ಅದು ಕೆಟ್ಟ ದಾರಿ ಹಿಡಿಯುವಂತೆ ಮಾಡುತ್ತದೆ: ಮೋಹನ್ ಭಾಗವತ್

Update: 2022-09-30 18:01 GMT

ನಾಗಪುರ, ಸೆ. 30: ಮಾಂಸಾಹಾರ ಸೇವನೆಯ ಬಗ್ಗೆ ಗುರುವಾರ ಪರೋಕ್ಷವಾಗಿ ಟೀಕಿಸಿದ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್, ಕೆಟ್ಟ ಆಹಾರ ಸೇವನೆ (ಮಾಂಸಹಾರ) ಹಾಗೂ ಜೀವಿಗಳನ್ನು ಕೊಂದು ತಿನ್ನುವುದು ಒಳ್ಳೆಯ ಪದ್ಧತಿ ಅಲ್ಲ ಎಂದಿದ್ದಾರೆ.

ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಸಂಘಟನೆ ಭಾರತ್ ವಿಕಾಸ್ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಯ ಬಗ್ಗೆ ಮಾತನಾಡಿದರು.

ನೀವು ಕೆಟ್ಟ ಆಹಾರ ತಿಂದರೆ, ಅದು ನಿಮ್ಮನ್ನು ಕೆಟ್ಟ ದಾರಿಯಲ್ಲಿ ನಡೆಸುತ್ತದೆ. ಆದುದರಿಂದ ತಾಮಸ ಆಹಾರವನ್ನು ತಿನ್ನಬಾರದು. ಅತಿಯಾದ ಹಿಂಸೆಯನ್ನು ಒಳಗೊಂಡ ಆಹಾರವನ್ನು ತಿನ್ನಬಾರದು. ತಾಮಸ ಆಹಾರ ಮಾಂಸಹಾರವನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ಹಾಗೂ ಭಾರತದಲ್ಲಿರುವ ಮಾಂಸಾಹಾರ ಸೇವಿಸುವವರನ್ನು ಹೋಲಿಕೆ ಮಾಡಿದ ಅವರು, ‘‘ಜಗತ್ತಿನ ಇತರೆಡೆಯಂತೆ ಭಾರತದಲ್ಲಿ ಕೂಡ ಮಾಸಾಹಾರ ಸೇವಿಸುವ ಜನರಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಮಾಂಸಹಾರಿಗಳು ಕೂಡ ಸಂಯಮವನ್ನು ಹಾಗೂ ನಿರ್ದಿಷ್ಟ ನಿಯಮಗಳನ್ನು ಅನುಸರಿಸುತ್ತಾರೆ’’ ಎಂದರು.

‘‘ಇಲ್ಲಿ ಮಾಸಾಹಾರ ಸೇವನೆ ಮಾಡುವ ಜನರು ಶ್ರಾವಣ ಮಾಸ ಪೂರ್ತಿ ಮಾಂಸಹಾರ ತ್ಯಜಿಸುತ್ತಾರೆ. ಸೋಮವಾರ, ಮಂಗಳವಾರ, ಗುರುವಾರ ಅಥವಾ ಶನಿವಾರ ಮಾಂಸಾಹಾರ ಸೇವಿಸುವುದಿಲ್ಲ. ಅವರು ತಮಗೆ ತಾವೇ ಕೆಲವು ನಿಯಮಗಳನ್ನು ವಿಧಿಸಿಕೊಂಡಿದ್ದಾರೆ’’ ಎಂದು ಭಾಗವತ್ ತಿಳಿಸಿದ್ದಾರೆ.

ದೇಶಾದ್ಯಂತ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭ ಮೋಹನ್ ಭಾಗವತ್ ಅವರು ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News