ದಿಲ್ಲಿ ಆಸ್ಪತ್ರೆಯಲ್ಲಿ ಜಾಮಿಯಾ ವಿ.ವಿ.ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ: ಪೊಲೀಸರಿಂದ ಎಫ್‌ಐಆರ್ ದಾಖಲು

Update: 2022-09-30 18:05 GMT

ಹೊಸದಿಲ್ಲಿ, ಸೆ. 30: ಇಲ್ಲಿನ ‘‘ಹಾಲಿ ಫ್ಯಾಮಿಲಿ ಆಸ್ಪತ್ರೆ’’ಯಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮೇಲೆ    ಇನ್ನೋರ್ವ ವಿದ್ಯಾರ್ಥಿ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಘರ್ಷಣೆಗೆ ನಡೆಯುತ್ತಿರುವ ಬಗ್ಗೆ ಗುರುವಾರ ರಾತ್ರಿ ಸುಮಾರು 8.50ಕ್ಕೆ ಮಾಹಿತಿ ಸ್ವೀಕರಿಸಲಾಗಿತ್ತು. ವಿಚಾರಣೆ ಸಂದರ್ಭ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವುದು ಬೆಳಕಿಗೆ ಬಂತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಘರ್ಷಣೆಯ ಸಂದರ್ಭ ಉತ್ತರಪ್ರದೇಶದ ಮೀರತ್ ಜಿಲ್ಲೆಯ ನಿವಾಸಿ ನೋಮನ್ ಚೌಧರಿ (26) ತಲೆಗೆ ಗಾಯವಾಗಿತ್ತು. ಅವರು ಕೂಡಲೇ ಗೆಳೆಯ ನೌಮನ್ ಅಲಿಯೊಂದಿಗೆ ಚಿಕಿತ್ಸೆಗೆ ಈಶಾನ್ಯ ದಿಲ್ಲಿ ಜಾಮಿಯಾ ನಗರದಲ್ಲಿರುವ ಹಾಲಿ ಫ್ಯಾಮಿಲಿ ಆಸ್ಪತ್ರೆಗೆ ತೆರಳಿದ್ದರು  ಎಂದು ಅವರು ತಿಳಿಸಿದ್ದಾರೆ. 
ಈ ನಡುವೆ ಎರಡನೇ ಗುಂಪಿನ ವಿದ್ಯಾರ್ಥಿ ಹಾಗೂ ಹರ್ಯಾಣದ ಮೇವಟ್‌ನ ನಿವಾಸಿ ಝಲಾಲ್ ತನ್ನ ಗೆಳೆಯರೊಂದಿಗೆ ಆಸ್ಪತ್ರೆಗೆ ಆಗಮಿಸಿದ ಹಾಗೂ ತುರ್ತು ಚಿಕಿತ್ಸಾ ವಾರ್ಡ್‌ನ ಹೊರಗೆ ಅಲಿ ಮೇಲೆ ಗುಂಡು ಹಾರಿಸಿದ್ದ ಎಂದು ಅವರು ತಿಳಿಸಿದ್ದಾರೆ.

ಇದರಿಂದ ಗಂಭೀರ ಗಾಯಗೊಂಡಿರುವ ನೌಮನ್ ಅಲಿಯನ್ನು ಏಮ್ಸ್‌ನ ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು. ತನಿಖಾ ತಂಡ ಅಪರಾಧ ನಡೆದ ಸ್ಥಳದ ಪರಿಶೀಲನೆ ನಡೆಸಿದೆ. ಘಟನೆಗೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಲಿ ಫ್ಯಾಮಿಲಿ ಆಸ್ಪತ್ರೆ  ಶುಕ್ರವಾರ ಹೇಳಿಕೆ ನೀಡಿ, ‘‘ಜಾಮಿಯಾ ನಗರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಗಾಯಗೊಂಡ ಕೆಲವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಕರೆದುಕೊಂಡು ಬರಲಾಗಿತ್ತು’’ ಎಂದಿದೆ.

‘‘ತುರ್ತು ನಿಗಾ ಘಟಕ ವಾರ್ಡ್‌ನ ಹೊರಗೆ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಗುಂಡು ಹಾರಿಸಿದೆ. ರೋಗಿಗಳು, ಸಿಬ್ಬಂದಿ ಹಾಗೂ ವೀಕ್ಷಕರಿಗೆ ಯಾವುದೇ ಗಾಯಗಳಾಗಿಲ್ಲ. ಪರಿಸ್ಥಿತಿಯನ್ನು ಕೂಡಲೇ ನಿಯಂತ್ರಣಕ್ಕೆ ತರಲಾಯಿತು’’ ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News