ಬಿಜೆಪಿ ಹಣ ಬಲ ಬಳಸಿ ರಾಜಕೀಯ ಪಕ್ಷಗಳನ್ನು ದುರ್ಬಲಗೊಳಿಸುತ್ತಿದೆ: ರಾಕೇಶ್ ಟಿಕಾಯತ್

Update: 2022-09-30 18:12 GMT

ಬಹರಾಯಿಚ್, ಸೆ. 30: ಬಿಜೆಪಿ ‘‘ಹಣ ಬಲ’’ ಬಳಸಿ ಎಲ್ಲ ರಾಜಕೀಯ ಪಕ್ಷಗಳನ್ನು ದುರ್ಬಲಗೊಳಿಸುತ್ತಿದೆ. ಇದರಿಂದ ಅದು ಏಕಾಂಗಿಯಾಗಿ ದೇಶವನ್ನು ಆಳಲು ಸಾಧ್ಯವಾಗಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ನಾಯಕ ಟಿಕಾಯತ್ ಶುಕ್ರವಾರ ಆರೋಪಿಸಿದ್ದಾರೆ.

ಈ ವರ್ಷ  ಆರಂಭದಲ್ಲಿ ನಡೆದ ಉತ್ತರಪ್ರದೇಶ ಚುನಾವಣೆಯ ಸಂದರ್ಭ 100ಕ್ಕೂ ಅಧಿಕ ವಿಧಾನ ಸಭೆ ಸ್ಥಾನಗಳ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ತಿರುಚಿದ್ದಾರೆ. ಇವಿಎಂ ಬಿಜೆಪಿಯ ಅಣತಿಯಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಶ್ರಾವಷ್ಠಿಗೆ ತೆರಳುತ್ತಿದ್ದ ಟಿಕಾಯತ್ ಅವರ ವಾಹನವನ್ನು ಇಲ್ಲಿನ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ತಡೆದು ನಿಲ್ಲಿಸಲಾಗಿತ್ತು. ಈ ಸಂದರ್ಭ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

‘‘ಅವರು (ಬಿಜೆಪಿ) ಪ್ರತಿಪಕ್ಷವನ್ನು ಸಂಪೂರ್ಣವಾಗಿ ನಾಶಗೊಳಿಸಲು ಬಯಸಿದ್ದಾರೆ. ಆದುದರಿಂದ ಏಕೈಕ ಪಕ್ಷ ದೇಶದ ಆಡಳಿತ ನಡೆಸುತ್ತಿದೆ. ಅವರು ಹಣ ಬಲವನ್ನು ಬಳಸಿ ಎಲ್ಲ ರಾಜಕೀಯ ಪಕ್ಷಗಳನ್ನು ದುರ್ಬಲಗೊಳಿಸುತ್ತಿದ್ದಾರೆ’’ ಎಂದು ಅನೌಪಚಾರಿಕ ಸಂವಾದದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಅವರು ಹೇಳಿದರು.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ ಬಗ್ಗೆ ಪ್ರಶ್ನಿಸಿದಾಗ ಟಿಕಾಯತ್, ದೇಶವನ್ನು ಸಂಘಟಿಸಲು ಇದು ಸರಿಯಾದ ನಡೆ. ಆದರೆ, ಇದನ್ನು ಈ ಮೊದಲೇ ನಡೆಸಬೇಕಿತ್ತು ಎಂದರು. ‘‘ಸಂಪೂರ್ಣ ಪ್ರತಿಪಕ್ಷ ಬೀದಿಗಿಳಿಯಬೇಕು. ಇಲ್ಲದೇ ಇದ್ದರೆ, ಮುಂದಿನ ದಿನಗಳಲ್ಲಿ ಎಲ್ಲ ಚಳುವಳಿಗಳು ಹಾಗೂ ರಾಜಕೀಯ ಪಕ್ಷಗಳು ನಿಷೇಧಕ್ಕೆ ಒಳಗಾಗಲಿವೆ’’ ಎಂದು ಟಿಕಾಯತ್ ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಕೇಂದ್ರ ಸರಕಾರ ನಿಷೇಧ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಪ್ಪೆಸಗುತ್ತಿರುವ ಯಾವುದೇ ಸಂಘಟನೆಯನ್ನು ನಿಯಂತ್ರಿಸುವುದನ್ನು ಸಮರ್ಥಿಸಿಕೊಳ್ಳಬಹುದು. ಆದರೆ, ಸರಕಾರ ಯಾವುದೇ ಸಮುದಾಯ ವಿರುದ್ಧ ತಾರತಮ್ಯ ಎಸಗಬಾರದು ಎಂದರು. ಬೆಳೆಗೆ ಕನಿಷ್ಠ ಬೆಂಬಲ ನೀಡುವಂತೆ ಹಾಗೂ ಅದಾನಿಯಂತಹ ಕಾರ್ಪೊರೇಟರ್‌ಗಳು ಭೂಮಿಯನ್ನು ಲೂಟಿಗೈಯುವುದನ್ನು ತಡೆಯುವಂತೆ ಆಗ್ರಹಿಸಿ ರೈತರು ದೇಶಾದ್ಯಂತ ಚಳವಳಿ ನಡೆಸಲಿದ್ದಾರೆ ಎಂದು ಟಿಕಾಯತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News