ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಲು ಚಿದಂಬರಂ, ದಿಗ್ವಿಜಯ ಸಿಂಗ್ ಪೈಪೋಟಿ

Update: 2022-10-01 02:33 GMT
ಚಿದಂಬರಂ - ದಿಗ್ವಿಜಯ ಸಿಂಗ್

ಹೊಸದಿಲ್ಲಿ: ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ವೇದಿಕೆ ಸಜ್ಜಾಗಿರುವ ಬೆನ್ನಲ್ಲೇ, ಅವರಿಂದ ತೆರವಾಗಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹುದ್ದೆಗಾಗಿ ಕಾಂಗ್ರೆಸ್‍ನಲ್ಲಿ ಪೈಪೋಟಿ ನಡೆದಿದ್ದು, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ದಿಗ್ವಿಜಯ ಸಿಂಗ್ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು timesofindia.com ವರದಿ ಮಾಡಿದೆ.

"ಒಬ್ಬ ವ್ಯಕ್ತಿ ಒಂದು ಹುದ್ದೆ" ಎಂಬ ನೀತಿಗೆ ಅನುಸಾರವಾಗಿ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷ ಮುಖಂಡ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. ಗುಲಾಮ್ ನಬಿ ಆಝಾದ್ ಅವರು 2021ರ ಫೆಬ್ರುವರಿಯಲ್ಲಿ ನಿವೃತ್ತರಾದ ಸಂದರ್ಭದಲ್ಲಿ ರಾಜ್ಯಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಖರ್ಗೆಯವರ ಹುದ್ದೆ ಮತ್ತೆ ತೆರವಾಗಲಿದೆ.

ಮೇಲ್ಮನೆಯ ಕಾಂಗ್ರೆಸ್ ಸಂಸದರ ಪೈಕಿ ಪಿ.ಚಿದಂಬರಂ ಅವರು ಅತ್ಯಂತ ಹಿರಿಯರಾಗಿದ್ದು, ಸಿಂಗ್ ನಂತರದ ಸ್ಥಾನದಲ್ಲಿದ್ದಾರೆ. ಖರ್ಗೆಯವರಿಗೆ ಬಡ್ತಿ ನೀಡಿದ ಕಾರಣದಿಂದ ರಾಜ್ಯಸಭೆ ವಿರೋಧ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವೇಳೆ ಪ್ರಾದೇಶಿಕ ಸಮತೋಲನದ ಕಸರತ್ತು ನಡೆಯಲಿದೆ ಎಂದು ಹೇಳಲಾಗುತ್ತಿದೆ.

"ಲೋಕಸಭೆಯ ವಿರೋಧ ಪಕ್ಷದ ಮುಖಂಡರು ಪೂರ್ವ ಭಾರತದವರಾಗಿದ್ದು, ಪಕ್ಷದ ಅಧ್ಯಕ್ಷರು ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ಮುಖಂಡರು ದಕ್ಷಿಣ ಭಾರತದಿಂದ ಆಗುವುದು ಕಷ್ಟಸಾಧ್ಯ. ಆದ್ದರಿಂದ ರಾಜ್ಯಸಭೆ ವಿರೋಧ ಪಕ್ಷ ಮುಖಂಡರ ಹುದ್ದೆಗೆ ಹಿಂದಿ ಮಾತನಾಡುವ ರಾಜ್ಯಗಳಿಂದ ಆಯ್ಕೆ ಮಾಡುವ ಸಾಧ್ಯತೆ ಇದೆ" ಎಂದು ಪಕ್ಷದ ಮೂಲಗಳು ಹೇಳಿವೆ.

ಪಕ್ಷಾಧ್ಯಕ್ಷ ಹುದ್ದೆಗೆ ನಾಮಪತ್ರ ನಮೂನೆಯನ್ನು ಗುರುವಾರ ಪಡೆಯುವ ಮೂಲಕ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ ದಿಗ್ವಿಜಯ ಸಿಂಗ್, "ಖರ್ಗೆಯವರು ನನ್ನ ಹಿರಿಯರಾಗಿರುವುದರಿಂದ ಅವರ ವಿರುದ್ಧ ಸ್ಪರ್ಧಿಸುವುದಿಲ್ಲ" ಎಂಬ ಕಾರಣ ನೀಡಿ ಶುಕ್ರವಾರ ಹಿಂದೆ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News