ವಕೀಲ ಆತ್ಮಹತ್ಯೆ ಹಿನ್ನೆಲೆ: ಮಧ್ಯಪ್ರದೇಶ ಹೈಕೋರ್ಟ್ ಕಟ್ಟಡ ಧ್ವಂಸಗೊಳಿಸಿದ ಉದ್ರಿಕ್ತ ಪ್ರತಿಭಟನಕಾರರು

Update: 2022-10-01 03:07 GMT

ಭೋಪಾಲ್: ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಜತೆ ಜಬಲ್ಪುರದಲ್ಲಿ ವಾಗ್ವಾದ ನಡೆಸಿದ ಕೆಲವೇ ಗಂಟೆಗಳಲ್ಲಿ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಹೈಕೋರ್ಟ್ ಆವರಣದಲ್ಲಿ ಪ್ರತಿಭಟನಾ ನಿರತ ವಕೀಲರು ದಾಂಧಲೆ ನಡೆಸಿದ್ದಾರೆ.

ಕೋರ್ಟ್ ಕೊಠಡಿಗಳನ್ನು ಧ್ವಂಸಗೊಳಿಸಿದ ಉದ್ರಿಕ್ತ ಪ್ರತಿಭಟನಕಾರರು ಹಿರಿಯ ವಕೀಲರೊಬ್ಬರ ಕಚೇರಿಗೆ ಬೆಂಕಿ ಹಚ್ಚಿದರು.

ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಯೊಬ್ಬರ ಜತೆ ವಾಗ್ವಾದಕ್ಕೆ ಇಳಿದ ಅನುರಾಗ್ ಸಾಹು ಎಂಬ ವಕೀಲ ಕೆಲವೇ ಗಂಟೆಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡರು. ನ್ಯಾಯಮೂರ್ತಿಗಳ ಯಾವ ಅಭಿಪ್ರಾಯದಿಂದ ವಕೀಲರು ಅಷ್ಟು ಹತಾಶರಾದರು ಎನ್ನುವುದು ಸ್ಪಷ್ಟವಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪ್ರತಿಭಟನಕಾರರು ಮೊದಲು ವಕೀಲ ಅನುರಾಗ್ ಸಾಹು ವಾಗ್ವಾದ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳ ಬಳಿಗೆ ಮೃತದೇಹವನ್ನು ಒಯ್ದರು. ಅಲ್ಲಿ ಅವರು ಇಲ್ಲದಿರುವುದನ್ನು ಗಮನಿಸಿ ಬಳಿಕ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯ ಪ್ರವೇಶಿಸಿ ದಾಂಧಲೆ ನಡೆಸಿದರು.

ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಬಳಿಕ ನ್ಯಾಯಮೂರ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನಕಾರರು ಧರಣಿ ನಡೆಸಿದರು. ನ್ಯಾಯಾಲಯದ ಆವರಣಕ್ಕೆ ಇದೀಗ ವಿಶೇಷ ಕಾರ್ಯಪಡೆ ಪೊಲೀಸರ ಪಹರೆ ನಿಯೋಜಿಸಲಾಗಿದೆ.

ಅನುರಾಗ್ ಸಾಹು ಅವರ ವಿರುದ್ಧ ನ್ಯಾಯಾಲಯದಲ್ಲಿ ಹಾಜರಾಗಿದ್ದ ಹಿರಿಯ ವಕೀಲರ ಕಚೇರಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದರು. ಈ ಕಟ್ಟಡ ರಾಜ್ಯ ವಕೀಲರ ಸಂಘದ ಕಟ್ಟಡದಲ್ಲಿದ್ದು, ನ್ಯಾಯಾಲಯ ಕಟ್ಟಡಕ್ಕೆ ಹೊಂದಿಕೊಂಡಿದೆ. ಘಟನೆ ವೇಳೆ ಕೆಲ ಪೊಲೀಸರಿಗೆ ಗಾಯಗಳಾಗಿವೆ ಎಂದು ಎಸ್ಪಿ ಸಿದ್ಧಾರ್ಥ ಬಹುಗುಣ ಹೇಳಿದ್ದಾಗಿ PTI ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News