ರಕ್ತ ಸಂಬಂಧಿಗಳಲ್ಲಿ ವಿವಾಹ ಕರ್ನಾಟಕದಲ್ಲೇ ಹೆಚ್ಚು...!

Update: 2022-10-01 04:48 GMT

ಇತ್ತೀಚೆಗೆ ಬಿಡುಗಡೆಯಾಗಿರುವ ಆರೋಗ್ಯ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶೇ.9.77ರಷ್ಟು ಯುವತಿಯರು ತಂದೆಯ ಕಡೆಯಿಂದ ಮೊದಲ ಸೋದರ ಸಂಬಂಧಿಯನ್ನು ವಿವಾಹವಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅದೇ ರೀತಿ ಶೇ.14ರಷ್ಟು ಮಹಿಳೆಯರು ತಾಯಿಯ ಕಡೆಯಿಂದ ಮೊದಲ ಸೋದರ ಸಂಬಂಧಿಯನ್ನು ಮದುವೆಯಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ವರದಿಯ ಪ್ರಕಾರ ಶೇ.0.5 ಮಹಿಳೆಯರು ಎರಡನೇ ತಂದೆ/ಸಂಬಂಧಿಯನ್ನು ಶೇ.2.5 ಮಹಿಳೆಯರು ಸಂಬಂಧಿಗಳನ್ನು ಮದುವೆಯಾಗಿದ್ದಾರೆ. ಅಲ್ಲದೆ ಶೇಕಡ 0.1 ಮಹಿಳೆಯರು ಸೋದರಮಾವನನ್ನು ವಿವಾಹವಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸಮೀಕ್ಷೆಯ ಪ್ರಕಾರ ಅಂತಹ 15-19 ವಯಸ್ಸಿನ ಗುಂಪಿನ ಜನರಲ್ಲಿ ಶೇ. 14.7ರಷ್ಟು ಜನರು ರಕ್ತ ಸಂಬಂಧಿಯನ್ನು ಮದುವೆಯಾಗಿದ್ದಾರೆ.

‘‘ಮದುವೆಗಳು ಸ್ವರ್ಗದಲ್ಲಿ ನಡೆಯುತ್ತದೆ’’ ಎನ್ನುವ ಗಾದೆ ಇಂದಿಗೂ ಜೀವಂತ. ಭಾರತ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಮದುವೆ ಎನ್ನುವ ಸಂಪ್ರದಾಯಕ್ಕೆ ಬಹಳ ಪಾವಿತ್ರತೆ ಮತ್ತು ಮಹತ್ವವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಎಂಬ ವ್ಯವಸ್ಥೆ ಸಂಪೂರ್ಣವಾಗಿ ಅರ್ಥ ಕಳೆದುಕೊಂಡಿರುವುದು ಅಷ್ಟೇ ಗಂಭೀರವಾದ ವಿಚಾರವಾಗಿದೆ. ಕೋ-ಲಿವಿಂಗ್, ಲಿವಿಂಗ್-ಟುಗೆದರ್ ಎನ್ನುವ ಪಾಶ್ಚಿಮಾತ್ಯ ವ್ಯವಸ್ಥೆ ಭಾರತಕ್ಕೆ ಬಂದ ಮೇಲಂತೂ ಮದುವೆಗಳು ಬಹಳಷ್ಟು ಕೋನಗಳಲ್ಲಿ ಅರ್ಥವನ್ನೇ ಕಳೆದುಕೊಂಡಿದೆ ಎನ್ನುತ್ತಾರೆ ಸಮಾಜಶಾಸ್ತ್ರಜ್ಞರು. ಮುಂದಿನ ಐವತ್ತು ವರ್ಷದಲ್ಲಿ ಮದುವೆ ಎನ್ನುವ ವ್ಯವಸ್ಥೆ ಯಾರೂ ಊಹಿಸಲಾರದ ಸ್ವರೂಪವನ್ನು ಪಡೆಯುತ್ತವೆ. ಈ ಮಧ್ಯೆ ಇತ್ತೀಚೆಗೆ ಬಿಡುಗಡೆಯಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಇದರ ಅಂಕಿ-ಅಂಶಗಳ ಪ್ರಕಾರ ಒಂದು ಕುತೂಹಲಕಾರಿ ಮಾಹಿತಿ ಹೊರಬಿದ್ದಿದ್ದು ಇಡೀ ದೇಶದಲ್ಲಿ ರಕ್ತ ಸಂಬಂಧಿಗಳಲ್ಲಿ ಮದುವೆ ಆಗುವ ಪ್ರಮಾಣದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ (ಭಾರತದಲ್ಲಿ ಇದರ ಪ್ರಮಾಣ ಶೇ.11) ಈ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಶೇ.27ರಷ್ಟು ಮದುವೆಗಳು ರಕ್ತಸಂಬಂಧಿಗಳಲ್ಲಿ ನಡೆಯುತ್ತಿದೆ ಎನ್ನುವುದು ಕುತೂಹಲಕಾರಿ ಮತ್ತು ವೈಜ್ಞಾನಿಕವಾಗಿ ಗಂಭೀರವಾದ ವಿಚಾರವಾಗಿದೆ. ಇಡೀ ದೇಶದಲ್ಲಿ ರಕ್ತಸಂಬಂಧಿಗಳಲ್ಲಿ ಮದುವೆಗಳು ತಮಿಳುನಾಡಿನಲ್ಲಿ ಅತಿ ಹೆಚ್ಚು ನಡೆಯುತ್ತವೆ ಮತ್ತು ನಂತರದಲ್ಲಿ ಕರ್ನಾಟಕ ಇದೆ ಎನ್ನುವುದು ಈ ಸಮೀಕ್ಷೆಯಿಂದ ತಿಳಿದುಬಂದಿದೆ. ಇದರೊಂದಿಗೆ ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶದ ನಂತರ ಪುದುಚೇರಿ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ ಮತ್ತು ಜಮ್ಮು-ಕಾಶ್ಮೀರ ಪ್ರದೇಶಗಳು ಅನುಕ್ರಮಣೀಯ ರೀತಿಯಲ್ಲಿ ಸ್ಥಾನಗಳನ್ನು ಪಡೆದುಕೊಂಡಿವೆ.

ರಕ್ತಸಂಬಂಧಿಗಳಲ್ಲಿ ವೈವಾಹಿಕ ಸಂಬಂಧಕ್ಕೆ ಬಹಳ ಇತಿಹಾಸವಿದೆ. ಎಲ್ಲಾ ಸಮುದಾಯಗಳಲ್ಲಿ ಶತ-ಶತಮಾನಗಳಿಂದ ಇದು ನಡೆಯುತ್ತಲಿದೆ. ಆದರೆ ಸಾಕ್ಷರತಾ ಪ್ರಮಾಣ ಈ ಮಟ್ಟಕ್ಕೆ ತಲುಪಿದ್ದು ವಿಜ್ಞಾನ ಮತ್ತು ಬೌದ್ಧಿಕ ಬೆಳವಣಿಗೆ ತುಂಬಾ ಉನ್ನತ ಸ್ಥಿತಿಯಲ್ಲಿ ಇರುವ ಈ ಕಾಲದಲ್ಲೂ ರಕ್ತಸಂಬಂಧಿಗಳಲ್ಲಿ ನಡೆಯುತ್ತಿರುವ ಮದುವೆ ಕುರಿತು ಸಂಬಂಧಪಟ್ಟವರು ಸ್ವಲ್ಪಚಿಂತಿಸಬೇಕಾಗಿದೆ. ಇಲ್ಲಿ ರಕ್ತಸಂಬಂಧಿಗಳಲ್ಲಿ ಮದುವೆ ಎಂದರೆ ಸ್ವಂತ ಅಕ್ಕನ ಮಗಳನ್ನು ಆಕೆಯ ತಮ್ಮ ಮದುವೆಯಾಗುವುದು ಅಥವಾ ಅಣ್ಣನ ಮಗನನ್ನು ತಂಗಿಯ ಮಗಳು ಮದುವೆಯಾಗುವುದು ಇತ್ಯಾದಿ. ನಗರ ಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿ ಈ ವ್ಯವಸ್ಥೆ ಇಂದಿಗೂ ಹೆಚ್ಚಾಗಿ ನಡೆಯುತ್ತಿದೆ.

 ಇತ್ತೀಚೆಗೆ ಬಿಡುಗಡೆಯಾಗಿರುವ ಆರೋಗ್ಯ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶೇ.9.77ರಷ್ಟು ಯುವತಿಯರು ತಂದೆಯ ಕಡೆಯಿಂದ ಮೊದಲ ಸೋದರ ಸಂಬಂಧಿಯನ್ನು ವಿವಾಹವಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅದೇ ರೀತಿ ಶೇ.14ರಷ್ಟು ಮಹಿಳೆಯರು ತಾಯಿಯ ಕಡೆಯಿಂದ ಮೊದಲ ಸೋದರ ಸಂಬಂಧಿಯನ್ನು ಮದುವೆಯಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ವರದಿಯ ಪ್ರಕಾರ ಶೇ.0.5 ಮಹಿಳೆಯರು ಎರಡನೇ ತಂದೆ/ಸಂಬಂಧಿಯನ್ನು ಶೇ.2.5 ಮಹಿಳೆಯರು ಸಂಬಂಧಿಗಳನ್ನು ಮದುವೆಯಾಗಿದ್ದಾರೆ. ಅಲ್ಲದೆ ಶೇಕಡ 0.1 ಮಹಿಳೆಯರು ಸೋದರಮಾವನನ್ನು ವಿವಾಹವಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸಮೀಕ್ಷೆಯ ಪ್ರಕಾರ ಅಂತಹ 15-19 ವಯಸ್ಸಿನ ಗುಂಪಿನ ಜನರಲ್ಲಿ ಶೇ. 14.7ರಷ್ಟು ಜನರು ರಕ್ತ ಸಂಬಂಧಿಯನ್ನು ಮದುವೆಯಾಗಿದ್ದಾರೆ. ನಗರ ಪ್ರದೇಶದಲ್ಲಿ ಮತ್ತು ಗ್ರಾಮೀಣ ಜನರಲ್ಲಿ ರಕ್ತಸಂಬಂಧಿ ವಿವಾಹಗಳ ಸಂಖ್ಯೆಯಲ್ಲಿ ಅಂತಹ ದೊಡ್ಡ ವ್ಯತ್ಯಾಸವಿಲ್ಲ. ನಗರ ಪ್ರದೇಶದಲ್ಲಿ ಶೇ.11 ಮತ್ತು ಶೇ.10.7 ಗ್ರಾಮೀಣ ಪ್ರದೇಶದಲ್ಲಿ ಯುವಕ-ಯುವತಿಯರು ಈ ರೀತಿ ಮದುವೆಯಾಗಿದ್ದಾರೆ. ಇಂತಹ ದಂಪತಿಗಳಲ್ಲಿ ಕನಿಷ್ಠ ಶಾಲಾ ಶಿಕ್ಷಣವನ್ನು ಪಡೆದವರು ಶೇ.12.4 ಇದ್ದರೆ ಶೇ. 9.8ರಷ್ಟು ದಂಪತಿಗಳು 12 ವರ್ಷಗಳಿಗಿಂತ ಹೆಚ್ಚು ಶಾಲಾ ಶಿಕ್ಷಣವನ್ನು ಪಡೆದವರಾಗಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಮಧ್ಯಮ ವರ್ಗದವರಲ್ಲಿ ಇದು ಅತ್ಯಧಿಕವಾಗಿದೆ. ಸಮೀಕ್ಷೆಯ ಪ್ರಕಾರ ಶೇ. 13 ಮೇಲ್ಮಧ್ಯಮ ವರ್ಗ, ಶೇ. 12.7 ಕೆಳ ಮಧ್ಯಮ ವರ್ಗ, ಶೇ. 10.8 ಶ್ರೀಮಂತ ವರ್ಗ, ಶೇ. 9.6 ಮತ್ತು ಅಂತಿಮವಾಗಿ ಬಡವರು ಶೇ. 7.5ರಲ್ಲಿ ಕಂಡುಬಂದಿದೆ. ರಕ್ತಸಂಬಂಧಿ ವಿವಾಹಗಳು ಶ್ರೀಮಂತ ಮತ್ತು ಮಧ್ಯಮ ವರ್ಗದವರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎನ್ನುತ್ತದೆ ಸಮೀಕ್ಷೆ.

ಈಗ ಈ ಕುತೂಹಲಕಾರಿ ಸಂಖ್ಯಾಶಾಸ್ತ್ರದ ಹಿನ್ನೆಲೆಯನ್ನು ನಾವು ಕೆದಕುತ್ತ ಹೋದರೆ ಭಾರತೀಯ ಕುಟುಂಬ ಮತ್ತು ವೈವಾಹಿಕ ವಿಚಾರದ ಇತಿಹಾಸವನ್ನು ಸ್ವಲ್ಪಗಮನಿಸಬೇಕಾಗುತ್ತದೆ. ಮಾನವಶಾಸ್ತ್ರಜ್ಞರ ಪ್ರಕಾರ ಇದಕ್ಕೆ ಮೊದಲ ಕಾರಣ ತವರು ಮನೆಯೊಂದಿಗಿನ ಸಂಬಂಧಗಳನ್ನು ಉಳಿಸಿಕೊಳ್ಳುವುದು ಎನ್ನುವ ಒಂದು ಭಾವನಾತ್ಮಕ ವಿಚಾರ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅದರಲ್ಲೂ ಕೌಟುಂಬಿಕ ವ್ಯವಸ್ಥೆಯಲ್ಲಿ ಅತಿ ಚಿಕ್ಕ ವಯಸ್ಸಿನಿಂದಲೇ ಅತ್ತೆಯ ಮಗಳು, ಮಾವನ ಮಗ ಎನ್ನುವ ಪರಿಕಲ್ಪನೆ ಎಳೆ ವಯಸ್ಸಿನ ಮಕ್ಕಳ ಮನಸ್ಸಿಗೆ ತರುವ ಪ್ರಯತ್ನ ಕೆಲವು ಕುಟುಂಬಗಳಲ್ಲಿ ಆರಂಭವಾಗುತ್ತದೆ. ಇದಕ್ಕೆ ಹಿರಿಯರು ನೀರು ಹಾಕಿ ಪೋಷಣೆ ಮಾಡುತ್ತಾರೆ. ಇಲ್ಲಿ ಇನ್ನೂ ಕೆಲವು ಅಂಶಗಳನ್ನು ಪರಿಗಣಿಸಲಾಗುತ್ತದೆ. ಒಂದು ಗೊತ್ತಿರುವ ಕುಟುಂಬಕ್ಕೆ ಹೆಣ್ಣುಕೊಟ್ಟರೆ ಯಾವ ಸಮಸ್ಯೆಯೂ ಆಗುವುದಿಲ್ಲ ಮತ್ತು ತೀರಾ ಗೊತ್ತಿರುವ ಮನೆಯಿಂದ ಹೆಣ್ಣು ತಂದರೆ ಕುಟುಂಬವು ಸುರಕ್ಷಿತ ಎನ್ನುವ ಇನ್ನೊಂದು ಭಾವನೆಯು ಹೆಚ್ಚಿನ ಭಾರತೀಯರಲ್ಲಿ ಮನೆ ಮಾಡಿದೆ. ಗಂಡು/ಹೆಣ್ಣಿನ ಹಿನ್ನೆಲೆಯನ್ನು ಕೆದಕುವ ಸಂದರ್ಭವೇ ಬರುವುದಿಲ್ಲ. ಏಕೆಂದರೆ ಎಲ್ಲರೂ ಕಣ್ಣು ಮುಂದೆಯೇ ಆಡಿ ಬೆಳೆದಿರುತ್ತಾರೆ. ಬೇರೆ ಮನೆಯಿಂದ ಸೊಸೆಯನ್ನು ತಂದರೆ ಅತ್ತೆಯೊಂದಿಗೆ ಹೊಂದಾಣಿಕೆ ಇರುತ್ತದೆಯೋ ಇಲ್ಲವೇ ಎನ್ನುವ ಚಿಂತೆ ಇರುತ್ತದೆ. ರಕ್ತಸಂಬಂಧಿಗಳಲ್ಲಿ ಮದುವೆ ಮಾಡಿದರೆ ಆಸ್ತಿ, ಹಣ, ಸಂಪತ್ತು ಎಲ್ಲವೂ ಸುರಕ್ಷಿತವಾಗಿ ಅದೇ ಕುಟುಂಬದಲ್ಲೇ ಉಳಿದುಕೊಳ್ಳುತ್ತದೆ. ಬೇರೆ ಕಡೆ ಮದುವೆ ಮಾಡಿಕೊಟ್ಟರೆ ಆಸ್ತಿ, ಸಂಪತ್ತುಗಳೆಲ್ಲವೂ ಕಾಲಕ್ರಮೇಣ ಕೈಬಿಟ್ಟು ಹೋಗುತ್ತದೆ ಎನ್ನುವ ಒಂದು ಭಯ ಜನಸಾಮಾನ್ಯರಲ್ಲಿ ಮನೆಮಾಡಿರುತ್ತದೆ. ಭೂಮಿ ಪಾಲಾಗುವುದನ್ನು ಅಥವಾ ತುಂಡಾಗುವುದನ್ನು ತಪ್ಪಿಸುವುದು, ಮನೆ ಭಾಗವಾಗುವುದನ್ನು ತಪ್ಪಿಸುವುದು ಸಹ ಇನ್ನೊಂದು ಕಾರಣ. ಅದಲ್ಲದೆ ಇದರ ಮೂಲಕ ವರದಕ್ಷಿಣೆ, ವರೋಪಚಾರ, ಖರ್ಚುಗಳು ಎಲ್ಲವನ್ನೂ ಒಂದು ಹಂತದವರೆಗೆ ಕಡಿಮೆ ಮಾಡಿಕೊಳ್ಳಲು ಸಾಧ್ಯತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಕಿರುಕುಳ, ಆಸ್ತಿಗಾಗಿ ಕಿತ್ತಾಟ, ವಿವಾಹ ವಿಚ್ಛೇದನ ಇವುಗಳೆಲ್ಲಾ ಮದುವೆ ಮೇಲೆ ಪ್ರಭಾವ ಬೀರುತ್ತಿರುವುದರಿಂದ ರಕ್ತ ಸಂಬಂಧಗಳಲ್ಲಿ ಮದುವೆಯಾದರೆ ಈ ಯಾವ ಸಮಸ್ಯೆಗಳು ಇರುವುದಿಲ್ಲ ಎನ್ನುವ ದೃಢವಾದ ನಂಬಿಕೆ ಹೆಚ್ಚಿನ ಪೋಷಕರಲ್ಲಿ ಮನೆಮಾಡಿದೆ. ಹಿಂದೆ ಅವಿಭಕ್ತ ಕುಟುಂಬಗಳು ಭಾರತದಲ್ಲಿ ಅತಿ ಹೆಚ್ಚಾಗಿದ್ದುದರಿಂದ ರಕ್ತ ಸಂಬಂಧಿಗಳಲ್ಲಿ ವಿವಾಹ ವ್ಯವಸ್ಥೆ ತುಂಬಾ ಬಲಿಷ್ಠವಾಗಿತ್ತು. ಹೆಚ್ಚಿನ ಮದುವೆಗಳು ಇದೇ ರೀತಿ ನಡೆಯಲು ಆರಂಭವಾಗುತ್ತಿದ್ದಂತೆ ಈ ಮದುವೆ ಜನಪ್ರಿಯತೆ ಪಡೆದುಕೊಂಡಿತು. ಇದರಿಂದ ಹೆಣ್ಣು ಅಥವಾ ಗಂಡನ್ನು ಹುಡುಕಿಕೊಂಡು ಊರೂರು ಅಲೆಯುವ ಕಷ್ಟವು ಸಹ ತಪ್ಪುತ್ತದೆ ಎನ್ನುವ ಸ್ವಾರ್ಥ ಆಲೋಚನೆ ಸಹ ಇದೆ.

 ಈ ಮದುವೆಗಳಿಂದ ಮುಂದೆ ಉಂಟಾಗುವ ಗಂಭೀರ ಆರೋಗ್ಯ ಪರಿಣಾಮಗಳ ಕುರಿತು ಅರಿವು ಹೆಚ್ಚಿನ ಭಾರತೀಯರಲ್ಲಿ ಖಂಡಿತವಾಗಿಯೂ ಇಲ್ಲ. ಕೆಲವು ಸಂಶೋಧನೆಗಳ ಪ್ರಕಾರ ಹೆಚ್ಚಿನ ಜೀನ್ಸ್ ಸಂಬಂಧಿತ ಕಾಯಿಲೆಗಳು ಇಂತಹ ಮದುವೆಯಿಂದ ದಂಪತಿಗಳಿಗೆ ಹುಟ್ಟುವ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುವುದು ಬಹಳಷ್ಟು ವರ್ಷಗಳ ಹಿಂದೆಯೇ ವೈಜ್ಞಾನಿಕವಾಗಿ ನಿರೂಪಿತವಾಗಿದೆ. ಸರಕಾರ ಮತ್ತು ವಿಜ್ಞಾನಿಗಳು ಸಹ ಸಾಕಷ್ಟು ರೀತಿಯಲ್ಲಿ ಇದನ್ನು ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ ರಕ್ತಸಂಬಂಧಿಗಳಲ್ಲಿ ಮದುವೆ ಆಗುತ್ತಿರುವುದು ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ವೈಜ್ಞಾನಿಕವಾಗಿ ಹೇಳಬೇಕಾದರೆ ಜೀನ್ಸ್ (ಸೂಕ್ಷ್ಮಾಣುಗಳು) ಮನುಷ್ಯನ ಹಣೆಬರಹ ನಿರ್ಧರಿಸುವ ಒಂದು ಜೈವಿಕ ಅಂಶ. ಈ ಜೀನ್ಸ್‌ಗಳು ನಮ್ಮ ಬಣ್ಣ, ಎತ್ತರ, ತೂಕ, ಆರೋಗ್ಯ, ಆಯಸ್ಸು ಎಲ್ಲವನ್ನೂ ನಿರ್ಧರಿಸುತ್ತದೆ. ತಮ್ಮ ರಕ್ತಸಂಬಂಧಿಗಳಲ್ಲಿ ಮದುವೆ ಆದಾಗ ಅದೇ ಜೀನ್ಸ್‌ಗಳು ಪುನಃ ಅದೇ ಕುಟುಂಬದಲ್ಲಿ ಜನಿಸುವ ಮಕ್ಕಳಲ್ಲಿ ಸಂಚರಿಸುತ್ತವೆ. ಇಂತಹ ಸಂದರ್ಭದಲ್ಲಿ ಹುಟ್ಟುವ ಕೆಲವು ಮಕ್ಕಳು ಆಟೋಸೋಮಲ್ ರೆಸೆಸಿವ್ ಆಗಿರುತ್ತವೆ. ಅಂದರೆ ತಂದೆ-ತಾಯಿಯಿಂದ ದೋಷಪೂರಿತ ಜೀನ್ಸ್‌ಗಳನ್ನು (ಇದ್ದರೆ?) ಮಗು ಸುಲಭವಾಗಿ ಪಡೆಯುತ್ತವೆ. ಇಂತಹ ವಿಕೃತ ಜೀನ್ಸ್‌ಗಳಿಂದ ಮಕ್ಕಳು ಮಾನಸಿಕ ಅಸ್ವಸ್ಥತೆ, ಕುಂಠಿತ ದೈಹಿಕ ಬೆಳವಣಿಗೆ, ಅಕಾಲಿಕ ಸಾವು ಇಂತಹ ಅತೀ ಭೀಕರವಾದ ಆರೋಗ್ಯ ಪರಿಣಾಮಗಳು ಹುಟ್ಟಿನ ಜೊತೆಗೆ ಮಕ್ಕಳಿಗೆ ಬರುತ್ತದೆ. ಅಲ್ಲದೆ ಪಾಲಿಸ್ಟಿಕ್ ಫೈಬ್ರೋಸಿಸ್, ದುರ್ಬಲವಾದ ಎಕ್ಸ್ ಸಿಂಡ್ರೋಮ್, ಹಿಮೋಫಿಲಿಯಾ ಕಾಯಿಲೆ, ಗ್ಲೂಕೋಸ್-6-ಫಾಸ್ಫೇಟ್-ಡಿಹೈಡ್ರೋಜಿನೇಸ್-ಕೊರತೆ, ಎಕ್ಸ್-ಲಿಂಕ್ಡ್ ಥ್ರಂಬೋಸೈಟೋಪೆನಿಯಾ ಅಂತಹ ಕಾಯಿಲೆಗಳು ಆಟೋಸೋಮಲ್ ರೆಸೆಸಿವ್‌ಗಳಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುತ್ತದೆ ವಿಜ್ಞಾನ. ಇಂಥಹ ಕಾಯಿಲೆ ಹೊತ್ತು ಬರುವ ಮಕ್ಕಳು ಬಹಳಷ್ಟು ವರ್ಷ ಬದುಕಲು ಅಸಾಧ್ಯ (ಅಂದರೆ ಬೇರೆ ದಂಪತಿಗಳ ಮಕ್ಕಳಿಗೆ ಬರುವುದಿಲ್ಲ ಎಂದು ಅರ್ಥವಲ್ಲ).

ಹಿಂದೆ ಇಂತಹ ಮದುವೆಗಳು ಹೆಚ್ಚಾಗಿ ಭಾರತದ ಆದಿವಾಸಿ ಕುಟುಂಬಗಳಲ್ಲಿ ಸಾಮಾನ್ಯವಾಗಿತ್ತು. ಇಂದಿಗೂ ಈ ಮದುವೆ ಆದಿವಾಸಿ ಕುಟುಂಬಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದಿವಾಸಿ ಕುಟುಂಬಗಳಲ್ಲಿ ರಕ್ತಸಂಬಂಧ ಮದುವೆಗಳಿಂದ ರೋಗಗ್ರಸ್ತ ಮಕ್ಕಳು ಸಂತಾನವಿಲ್ಲದೆ ಎಷ್ಟೋ ಕುಟುಂಬಗಳು ನಾಶವಾಗಿವೆ ಎನ್ನುವ ಉದಾಹರಣೆಗಳು ಭಾರತದಲ್ಲಿ ಕಂಡುಬಂದಿದೆ ಎನ್ನುತ್ತದೆ ದಾಖಲೆಗಳು. ಆಟೋಸೋಮಲ್ ರೆಸೆಸಿವ್‌ನಿಂದ ಉಂಟಾಗುವ ಕಾಯಿಲೆಗಳನ್ನು ನಿಯಂತ್ರಿಸಲು ಇರುವ ಏಕೈಕ ಮಾರ್ಗವೆಂದರೆ ರಕ್ತಸಂಬಂಧಿಗಳಲ್ಲಿ ಮದುವೆಯಾಗುವುದನ್ನು ಆದಷ್ಟು ತಪ್ಪಿಸುವುದು ಮತ್ತು ಮದುವೆಗೆ ಆದಷ್ಟು ಹೊಸ ಸಂಬಂಧಗಳಿಂದ ಹೆಣ್ಣು ಮತ್ತು ಗಂಡು ತರುವುದು ಇದಕ್ಕಿರುವ ಏಕೈಕ ದಾರಿ. ಮದುವೆಯ ಮುಖ್ಯ ಉದ್ದೇಶ ಸಂತಾನೋತ್ಪತ್ತಿ ಆಗಿರುವುದರಿಂದ (ಇತ್ತೀಚೆಗೆ ಇದನ್ನು ಕೇರಳ ಹೈಕೋರ್ಟ್ ಹೇಳಿದೆ) ಸಾಧ್ಯವಾದಷ್ಟು ರಕ್ತಸಂಬಂಧಿಗಳಲ್ಲಿ ವೈವಾಹಿಕ ಪದ್ಧತಿಯನ್ನು ಕಡಿಮೆ ಮಾಡುವುದು ಒಳ್ಳೆಯದು. ರೋಗಗ್ರಸ್ತ ಸಂತಾನ ಪಡೆದು ಏನು ಪ್ರಯೋಜನ. ಇತ್ತೀಚಿನ ದಿನಗಳಲ್ಲಿ ಮುಂಬೈ, ದಿಲ್ಲಿಯಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಮದುವೆ ನಿಶ್ಚಯವಾಗಿರುವ ಯುವಕ-ಯುವತಿಯರ ಜೀನ್ಸ್‌ಗಳ ಪರೀಕ್ಷೆಯನ್ನು ಮಾಡಿ ಅವರಿಗೆ ಹುಟ್ಟುವ ಮಕ್ಕಳಿಗೆ ಯಾವುದಾದರೂ ಸಂಬಂಧಿತ ಕಾಯಿಲೆಗಳು ಬರುತ್ತದೆಯೇ ಅಥವಾ ಇಲ್ಲವೇ ಎಂಬುದರ ಸಾಧ್ಯತೆ ಕುರಿತು ಮುಂಚಿತವಾಗಿ ಪರೀಕ್ಷೆಗಳನ್ನು ಮಾಡುವ ವ್ಯವಸ್ಥೆ ಆರಂಭವಾಗಿದೆ. ಇದನ್ನು ವೈಜ್ಞಾನಿಕವಾಗಿ ಜನೆಟಿಕ್ ಕೌನ್ಸೆಲಿಂಗ್ ಎನ್ನಲಾಗುತ್ತದೆ. ಸರಕಾರವೂ ಇಂತಹ ಕ್ರಮಗಳನ್ನು ಹೆಚ್ಚು ಜನಪ್ರಿಯಗೊಳಿಸಬೇಕು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ಬರಿಸುವ ಕುರಿತು ಆಲೋಚನೆ ಮಾಡಬೇಕಾಗಿದೆ. ಇದರ ಮೂಲಕ ನಾವು ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯ. ಈ ಲೇಖನದ ಉದ್ದೇಶ ರಕ್ತಸಂಬಂಧಿಗಳಲ್ಲಿ ಉಂಟಾಗುವ ಮದುವೆಗಳ ಕುರಿತು ನಕರಾತ್ಮಕ ಭಾವನೆಗಳಲ್ಲ, ಬದಲಾಗಿ ಕೆಲವು ಸಂದರ್ಭಗಳಲ್ಲಿ ಇವುಗಳಿಂದ ಆಗುವ ಆರೋಗ್ಯ ಪರಿಣಾಮ ಕುರಿತು ಅರಿವು ಉಂಟುಮಾಡುವುದು.

Writer - ಡಾ. ಡಿ.ಸಿ. ನಂಜುಂಡ

contributor

Editor - ಡಾ. ಡಿ.ಸಿ. ನಂಜುಂಡ

contributor

Similar News