'ಹಲೋ' ಬದಲು 'ವಂದೇ ಮಾತರಂ' ಹೇಳುವಂತೆ ಅಧಿಕಾರಿಗಳಿಗೆ ಮಹಾರಾಷ್ಟ್ರ ಸರಕಾರ ಆದೇಶ

Update: 2022-10-02 16:11 GMT
ಸಚಿವ ಸುಧೀರ್ ಮುಂಗಂಟಿವಾರ್ (PTI)

ಮುಂಬೈ,ಅ.2: ಸರಕಾರಿ ಮತ್ತು ಸರಕಾರಿ ಅನುದಾನಿತ ಸಂಸ್ಥೆಗಳ ಎಲ್ಲ ಉದ್ಯೋಗಿಗಳು ದೂರವಾಣಿ ಕರೆಗಳಿಗೆ ಉತ್ತರಿಸುವಾಗ ‘ಹಲೋ’ ಬದಲು ‘ವಂದೇ ಮಾತರಂ’ ಹೇಳುವುದನ್ನು ಕಡ್ಡಾಯಗೊಳಿಸಿ ಮಹಾರಾಷ್ಟ್ರ ಸರಕಾರವು ಶನಿವಾರ ಆದೇಶಿಸಿದೆ.

ಹಲೋ ಎನ್ನುವುದು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಾಗಿದ್ದು,ಹಾರ್ದಿಕತೆಯನ್ನು ಮೂಡಿಸುವುದಿಲ್ಲ ಎಂದು ಸರಕಾರವು ಹೇಳಿದೆ.ಅಧಿಕಾರಿಗಳು ತಮ್ಮ ಕಚೇರಿಗಳಿಗೆ ಭೇಟಿ ನೀಡುವವರು ಶುಭಾಶಯಗಳಿಗೆ ಹಲೋ ಬದಲು ವಂದೇ ಮಾತರಂ ಬಳಸುವಂತೆ ಅರಿವು ಮೂಡಿಸಬೇಕು ಎಂದೂ ಸರಕಾರದ ಸಾಮಾನ್ಯ ಆಡಳಿತ ಇಲಾಖೆಯು ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.

‘ಹಲೋ’ದಂತಹ ಅರ್ಥಹೀನ ಪದಕ್ಕಿಂತ ‘ವಂದೇ ಮಾತರಂ’ಪದವು ರಾಷ್ಟ್ರೀಯ ಹೆಮ್ಮೆಯನ್ನೂ ಸೃಷ್ಟಿಸುತ್ತದೆ. ಪರಸ್ಪರ ಭೇಟಿಗಳಲ್ಲಿ ಅಥವಾ ದೂರವಾಣಿಯಲ್ಲಿ ವಂದೇ ಮಾತರಂ ಹೇಳುವ ಮೂಲಕ ಮಾತುಕತೆ ಆರಂಭಿಸುವುದು ಪೂರಕ ವಾತಾವರಣ ಸೃಷ್ಟಿಗೆ ನೆರವಾಗುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನೂ ಉಂಟು ಮಾಡುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಆದೇಶವು ರವಿವಾರದಿಂದಲೇ ಸರಕಾರಿ,ಅರೆ ಸರಕಾರಿ ಸ್ಥಳೀಯಾಡಳಿತ ಸಂಸ್ಥೆಗಳು,ಅನುದಾನಿತ ಶಾಲಾ-ಕಾಲೇಜುಗಳು ಮತ್ತು ಇತರ ಸಂಸ್ಥೆಗಳಿಗೆ ಅನ್ವಯಗೊಂಡಿದೆ.‘ಹಲೋ’ ಬದಲು ‘ವಂದೇ ಮಾತರಂ’ ಹೇಳುವುದನ್ನು ಕಳೆದ ಆಗಸ್ಟ್‌ನಲ್ಲಿ ರಾಜ್ಯದ ಸಂಸ್ಕೃತಿ ಸಚಿವ ಸುಧೀರ ಮುಂಗಟ್ಟಿವಾರ ಅವರು ಮೊದಲು ಪ್ರಸ್ತಾವಿಸಿದ್ದರು. ‘ಹಲೋ’ ಇಂಗ್ಲಿಷ್ ಪದವಾಗಿದೆ ಮತ್ತು ಅದನ್ನು ಕೈಬಿಡುವುದು ಮುಖ್ಯವಾಗಿದೆ.‘ವಂದೇ ಮಾತರಂ’ ಕೇವಲ ಪದವಲ್ಲ,ಅದು ಪ್ರತಿ ಭಾರತೀಯನು ಅನುಭವಿಸುವ ಭಾವನೆಯಾಗಿದೆ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News