ಇಂಡೋನೇಶ್ಯಾ: ಫುಟ್‌ಬಾಲ್ ಪಂದ್ಯದಲ್ಲಿ ಗಲಭೆ, ಕಾಲ್ತುಳಿತ; ಮೃತಪಟ್ಟವರ ಸಂಖ್ಯೆ 174ಕ್ಕೆ ಏರಿಕೆ

Update: 2022-10-02 11:51 GMT
Photo: PTI

ಜಕಾರ್ತಾ: ಇಂಡೋನೇಶ್ಯಾದ (Indonesia) ಪೂರ್ವ ಜಾವಾ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ಫುಟ್‌ಬಾಲ್ (Football) ಪಂದ್ಯ ನಡೆಯುತ್ತಿದ್ದ ವೇಳೆ ಗಲಭೆ, ಕಾಲ್ತುಳಿತದಿಂದಾಗಿ (Stampede) ಕನಿಷ್ಠ 174 ಜನರು ಸಾವನ್ನಪ್ಪಿದ್ದು,180ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ತವರು ತಂಡ ಪಂದ್ಯದಲ್ಲಿ ಸೋತ ಬಳಿಕ ಮೈದಾನದೊಳಗೆ ನುಗ್ಗಿದ ಕುಪಿತ ಅಭಿಮಾನಿಗಳು ಮತ್ತು ಭದ್ರತಾ ಅಧಿಕಾರಿಗಳ ನಡುವೆ ಘರ್ಷಣೆ ಕಾಲ್ತುಳಿತಕ್ಕೆ ಕಾರಣವಾಗಿತ್ತು. ಗುಂಪನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದಾಗ ಭೀತಿಗೊಂಡಿದ್ದ ಅಭಿಮಾನಿಗಳು ಪರಾರಿಯಾಗಲು ಪ್ರಯತ್ನಿಸುತ್ತಿದ್ದಂತೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.

ಮಲಾಂಗ್‌ನಲ್ಲಿಯ ಸ್ಟೇಡಿಯಮ್‌ನಲ್ಲಿ ಅರೆಮಾ ಎಫ್‌ಸಿ ಮತ್ತು ಪರ್ಸೆಬಯ ಸುರಬಯ ತಂಡಗಳ ನಡುವಿನ ಬಿಆರ್‌ಐ ಲಿಗಾ 1 ಟೂರ್ನಮೆಂಟ್‌ನ ಪಂದ್ಯ ಮುಗಿದ ಬಳಿಕ ಈ ದುರಂತ ಸಂಭವಿಸಿದೆ. ಅರೆಮಾ ಎಫ್‌ಸಿ ತಂಡದ ಸೋಲಿನಿಂದ ಹತಾಶಗೊಂಡ ಅಭಿಮಾನಿಗಳು ಮೈದಾನವನ್ನು ಆಕ್ರಮಿಸಿದಾಗ ಅವರನ್ನು ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿಗಳು ಅಶ್ರುವಾಯು ಪ್ರಯೋಗಿಸಿದ್ದರು. ಗುಂಪು ನಿರ್ಗಮನ ದ್ವಾರದತ್ತ ಓಡುತಿದ್ದಾಗ ಕಾಲ್ತುಳಿತದಿಂದಾಗಿ ಮತ್ತು ಉಸಿರುಗಟ್ಟಿ ಜನರು ಮೃತಪಟ್ಟಿದ್ದಾರೆ.

ಸುಮಾರು 3,000 ಜನರು ಮೈದಾನದೊಳಕ್ಕೆ ನುಗ್ಗಿದ್ದು ಅರಾಜಕತೆಯುಂಟಾಗಿತ್ತು, ಅವರು ಭದ್ರತಾ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕಾರುಗಳಿಗೂ ಹಾನಿಯನ್ನುಂಟು ಮಾಡಿದ್ದರು ಎಂದು ಪೂರ್ವ ಜಾವಾ ಪೊಲೀಸ್ ಮುಖ್ಯ ಇನ್‌ಸ್ಪೆಕ್ಟರ್ ನಿಕೋ ಅಫಿಂಟಾ ಸುದ್ದಿಗಾರರಿಗೆ ತಿಳಿಸಿದರು.

ಸ್ಟೇಡಿಯಂ ಕಿಕ್ಕಿರಿದು ತುಂಬಿತ್ತು. 38,000 ಜನರಿಗೆ ಸ್ಥಳಾವಕಾಶದ ಸಾಮರ್ಥ್ಯ ಹೊಂದಿದ್ದರೂ 42,000 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು ಎಂದು ಇಂಡೋನೇಶಿಯಾದ ಮುಖ್ಯ ಭದ್ರತಾ ಸಚಿವ ಮಹ್ಫುದ್ ಎಂ.ಡಿ.ತಿಳಿಸಿದರು.

ಮೃತರಲ್ಲಿ ಪೋಲೀಸರೂ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.

ತನಿಖೆಯು ಪೂರ್ಣಗೊಳ್ಳುವವರೆಗೆ ಬಿಆರ್‌ಐ ಲಿಗಾ 1ರ ಎಲ್ಲ ಪಂದ್ಯಗಳನ್ನು ಅಮಾನತುಗೊಳಿಸುವಂತೆ ದೇಶದ ಅಧ್ಯಕ್ಷ ಜೋಕೊ ವಿಡೋಡೊ ಅವರು ಫುಟ್‌ಬಾಲ್ ಅಸೋಸಿಯೇಷನ್ ಆಫ್ ಇಂಡೋನೇಶಿಯಾಕ್ಕೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News