ವ್ಯಕ್ತಿತ್ವದ ವೈಭವೀಕರಣ, ಟೀಕೆ ಎರಡೂ ಸಲ್ಲದು: ಡಾ.ನಂದನ್ ಪ್ರಭು

Update: 2022-10-02 15:21 GMT

ಉಡುಪಿ, ಅ.2: ಮಹಾನ್ ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಹಲವು ಆಯಾಮಗಳಿವೆ. ವ್ಯಕ್ತಿತ್ವದ ವೈಭವೀಕರಣ ಹಾಗೂ ಟೀಕೆ ಎರಡೂ ಸಲ್ಲದು. ವಿಚಾರಧಾರೆಗಳನ್ನು ವಿಶ್ಲೇಷಿಸಿ ಸಮನ್ವಯ ಸಾಧಿಸಬೇಕು ಎಂದು ಟ್ಯಾಪ್ಮಿ, ಮಣಿಪಾಲದ ಪ್ರಾಧ್ಯಾಪಕ ಪ್ರೊ.ಡಾ.ನಂದನ್ ಪ್ರಭು ಅಭಿಪ್ರಾಯಪಟ್ಟರು.

ಎಂಜಿಎಂ ಕಾಲೇಜಿನಲ್ಲಿ ನಡೆದ ಗಾಂಧಿ ಜಯಂತಿ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಗಾಂಧೀಜಿಯವರ ವ್ಯಕ್ತಿತ್ವದ ಸರಳತೆಯೇ ಅವರನ್ನು ನಾಯಕರನ್ನಾಗಿ ಮಾಡಿತು. ಜಗತ್ತಿನಾ ದ್ಯಂತ ಸಾವಿರಾರು ಜನರನ್ನು ಆಕರ್ಷಿಸಿ, ಅವರ ಕರೆಗೆ ದೇಶವೇ ಓಗೊಡುವಂತೆ ಮಾಡಿತು. ಅಹಿಂಸೆ, ಕೃಷಿ ಕೇಂದ್ರಿತ ಹಾಗೂ ಕೌಶಲ್ಯಾಧಾರಿತ ಶಿಕ್ಷಣ, ಇನ್ನಿತ್ಯಾದಿ ವಿಚಾರಗಳು ಅವರ ಶ್ರೇಷ್ಠತೆಯನ್ನು ಸಾರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ  ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರೀಜಿ ಪ್ರತಿಪಾದಿಸಿದ ಮೌಲ್ಯಗಳ ಗುಣ ಗಾನ ಮಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಎ. ಉಪಸ್ಥಿತರಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಸ್ವಾಗತಿಸಿ, ವಂದಿಸಿದರು. ಪತ್ರಿಕೋದ್ಯಮ ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News