ಒಮ್ಮತದ ಅಭ್ಯರ್ಥಿಯನ್ನು ಹೊಂದಿರುವುದು ಒಳ್ಳೆಯದು: ಶಶಿ ತರೂರ್ ಗೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು

Update: 2022-10-02 16:20 GMT
photo: PTI

ಹೊಸದಿಲ್ಲಿ,ಅ.2: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಓರ್ವರಾಗಿರುವ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ‘ಅಧ್ಯಕ್ಷ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಹೊಂದಿರುವುದು ಬಹಳ ಒಳ್ಳೆಯದು’ ಎಂದು ತಾನು ಕಣದಲ್ಲಿರುವ ಇನ್ನೋರ್ವ ಅಭ್ಯರ್ಥಿ ಶಶಿ ತರೂರ್ ಅವರಿಗೆ ತಿಳಿಸಿದ್ದೇನೆ ಎಂದು ರವಿವಾರ ಇಲ್ಲಿ ಹೇಳಿದರು. ಪಕ್ಷದ ಹಿರಿಯ ನಾಯಕರ ಒತ್ತಾಯದಿಂದಾಗಿ ತಾನು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾಗಿಯೂ ಅವರು ತಿಳಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ಅವರು,ರಾಹುಲ್ ಗಾಂಧಿ,ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಚುನಾವಣೆಗೆ ಸ್ಪರ್ಧಿಸಲು ಬಯಸಿರಲಿಲ್ಲ, ಹೀಗಾಗಿ ತನ್ನ ಹಿರಿಯ ಸಹೋದ್ಯೋಗಿಗಳು ಸ್ಪರ್ಧಿಸುವಂತೆ ತನಗೆ ಸೂಚಿಸಿದ್ದರು. ತಾನು ಯಾರ ವಿರುದ್ಧವೂ ಹೋರಾಡುತ್ತಿಲ್ಲ, ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದೇನೆ ಎಂದರು.
 
ತರೂರ್ ಅವರು ಪ್ರಸ್ತಾಪಿಸಿರುವ ಯಥಾಸ್ಥಿತಿ ಮತ್ತು ಬದಲಾವಣೆಯ ಕುರಿತು ಪ್ರತಿನಿಧಿಗಳು ಮತ್ತು ಎಐಸಿಸಿ ನಿರ್ಧರಿಸುತ್ತದೆ. ಒಂದು ವ್ಯಕ್ತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಅದನ್ನು ಸಾಮೂಹಿಕವಾಗಿ ತೆಗೆದುಕೊಳ್ಳಲಾಗುತ್ತದೆ ಎಂದ ಖರ್ಗೆ,‘ಮಹಾತ್ಮಾ ಗಾಂಧಿ ಮತ್ತು ಲಾಲ ಬಹಾದೂರ ಶಾಸ್ತ್ರಿಯವರ ಜನ್ಮದಿನದಂದು ನಾನು ನನ್ನ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದೇನೆ. ನಾನು ಯಾವಾಗಲೂ ನನ್ನ ಸಿದ್ಧಾಂತ ಮತ್ತು ನೀತಿಗಾಗಿ ಹೋರಾಡಿದ್ದೇನೆ. ನಾನು ಹಲವಾರು ವರ್ಷಗಳ ಕಾಲ ಪ್ರತಿಪಕ್ಷ ನಾಯಕ,ಸಚಿವ ಮತ್ತು ಶಾಸಕನಾಗಿದ್ದೇನೆ. ಈಗ ಮತ್ತೆ ಹೋರಾಡಲು ಹಾಗೂ ಅವೇ ನೀತಿಗಳು ಮತ್ತು ಸಿದ್ಧಾಂತವನ್ನು ಮುಂದಕ್ಕೊಯ್ಯಲು ಬಯಸಿದ್ದೇನೆ ’ಎಂದು ಹೇಳಿದರು.

ತನ್ನ ಉಮೇದುವಾರಿಕೆಯ ಕುರಿತು ವಿವರಿಸಿದ ಖರ್ಗೆ,ತಾನು ಕೇವಲ ದಲಿತ ನಾಯಕನಾಗಿ ಸ್ಪರ್ಧಿಸುತ್ತಿಲ್ಲ,ತಾನು ಕಾಂಗ್ರೆಸ್ ನಾಯಕನಾಗಿ ಸ್ಪರ್ಧಿಸುತ್ತಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಅ.17ರಂದು ಚುನಾವಣೆ ನಡೆಯಲಿದ್ದು, ಅ.19ರಂದು ಮತಗಳ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News