2ನೇ ಟ್ವೆಂಟಿ-20: ಅರ್ಧಶತಕ ಗಳಿಸುವ ಅವಕಾಶ ಬಿಟ್ಟುಕೊಟ್ಟು ಜನಮನ ಗೆದ್ದ ವಿರಾಟ್ ಕೊಹ್ಲಿ

Update: 2022-10-03 08:08 GMT

ಗುವಾಹಟಿ: ವಿರಾಟ್ ಕೊಹ್ಲಿ (Virat Kohli) ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ ಹಾಗೂ ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. 71 ಅಂತರ್ ರಾಷ್ಟ್ರೀಯ ಶತಕ ಗಳಿಸುವುದರೊಂದಿಗೆ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ್ದಾರೆ. ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಮಾತ್ರ ಹೆಚ್ಚು ಶತಕ ಗಳಿಸಿದ್ದಾರೆ. ಆದಾಗ್ಯೂ, ಕೊಹ್ಲಿ ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಂಡಕ್ಕೆ ಉತ್ತಮವಾದದ್ದನ್ನು ನೀಡಲು ಹೆಚ್ಚು ಆಸಕ್ತಿ ತೋರುತ್ತಾ ಬಂದಿದ್ದಾರೆ ಎನ್ನುವುದಕ್ಕೆ  ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ನಡೆದ 2ನೇ ಟಿ-20 ಪಂದ್ಯದ ಈ ಘಟನೆ ಸಾಕ್ಷಿಯಾಗಿದೆ. ಅರ್ಧಶತಕ ಗಳಿಸುವ ಅವಕಾಶವನ್ನು ಬಿಟ್ಟುಕೊಟ್ಟ ಕೊಹ್ಲಿ ನಿಸ್ವಾರ್ಥತೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಾತ್ರರಾದರು.

ಕೊಹ್ಲಿ 28 ಎಸೆತಗಳಲ್ಲಿ 49 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಅಂತಿಮ ಓವರ್‌ ನಲ್ಲಿ ದಿನೇಶ್ ಕಾರ್ತಿಕ್ ಸ್ಟ್ರೈಕ್‌ನಲ್ಲಿದ್ದರು.

ಭಾರತದ ನಿಯೋಜಿತ ಫಿನಿಶರ್ ಆಗಿರುವ ಕಾರ್ತಿಕ್ ಮೊದಲ ಎಸೆತದಲ್ಲಿ ರನ್ ಗಳಿಸಲಿಲ್ಲ. ಆದರೆ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದರು. ಒಂದು ಡಾಟ್ ಬಾಲ್ ಹಾಗೂ ವೈಡ್ ನಂತರ ಕಾರ್ತಿಕ್ ಶಾರ್ಟ್ ವೈಡ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು.

ಸಿಕ್ಸರ್ ಸಿಡಿಸಿದ ನಂತರ ಕಾರ್ತಿಕ್ ಅವರು ಮಾಜಿ ನಾಯಕ ಕೊಹ್ಲಿಯತ್ತ ಧಾವಿಸಿ  50 ರನ್ ಪೂರೈಸಲು ನಿಮಗೆ ಸ್ಟ್ರೈಕ್ ಬೇಕೇ ಎಂದು ಕೇಳಿದರು. ಆಗ ಕೊಹ್ಲಿಗೆ ಅರ್ಧ ಶತಕ ಪೂರೈಸಲು ಕೇವಲ ಒಂದು ರನ್ ಅಗತ್ಯವಿತ್ತು. ಕೊನೆಯ ಓವರ್ ನಲ್ಲಿ ಎರಡು ಎಸೆತಗಳು ಬಾಕಿ ಉಳಿದಿದ್ದವು.

"ನೀವು ಬ್ಯಾಟಿಂಗ್ ಮುಂದುವರಿಸಿ'' ಎಂದು ಕಾರ್ತಿಕ್ ಗೆ ಕಿವಿಮಾತು ಹೇಳಿದ ಕೊಹ್ಲಿ ಅರ್ಧಶತಕ ಗಳಿಸುವ ಅವಕಾಶವನ್ನು ಬಿಟ್ಟುಕೊಟ್ಟರು. 

ಕಾರ್ತಿಕ್ ಎಕ್ಸ್‌ಟ್ರಾ ಕವರ್‌ನಲ್ಲಿ ಸೊಗಸಾದ ಸಿಕ್ಸರ್ ಬಾರಿಸಿದರು. ಈ ಮೂಲಕ ಭಾರತ 3 ವಿಕೆಟ್ ಗಳ ನಷ್ಟಕ್ಕೆ 237 ರನ್ ಗಳಿಸಿತು.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News