‘ಮೋದಿ ಸರಕಾರ ಕೃತಜ್ಞತೆಯನ್ನೂ ಹೇಳಲಿಲ್ಲ’: ಕೋಲ್ಕತಾದ ದುರ್ಗಾಪೂಜೆಗೆ UNESCO ಟ್ಯಾಗ್‌ಗಾಗಿ ಶ್ರಮಿಸಿದ್ದ ತಪತಿ ಗುಹಾ

Update: 2022-10-03 17:41 GMT
PHOTO SOURCE: FACEBOOK

ಕೋಲ್ಕತಾ,ಅ.3: ದಿಲ್ಲಿಯಲ್ಲಿ ರಾರಾಜಿಸುತ್ತಿರುವ ಪೋಸ್ಟರ್ವೊಂದರಲ್ಲಿ ಕೇಂದ್ರದ ಸಹಾಯಕ ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ‘ಪ್ರಾಮಾಣಿಕ ಕೃತಜ್ಞತೆ’ಗಳನ್ನು ವ್ಯಕ್ತಪಡಿಸಿರುವುದು ಕೆಲವರು ಹುಬ್ಬೇರಿಸುವಂತೆ ಮಾಡಿದೆ. ಯುನೆಸ್ಕೋ ಕೋಲ್ಕತಾದ ದುರ್ಗಾಪೂಜೆಯನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನಾಗಿ ಗುರುತಿಸುವಲ್ಲಿ ‘ಮಹಾನ್ ಪ್ರಯತ್ನಗಳಿಗಾಗಿ’ಲೇಖಿ ಮೋದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಕೋಲ್ಕತಾದಲ್ಲಿ ದುರ್ಗಾಪೂಜೆ ಉತ್ಸವದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಇತಿಹಾಸಕಾರರಾದ ತಪತಿ ಗುಹಾ ಥಾಕುರ್ತಾ,ನಿಜಕ್ಕೂ ತನಗೆ ಯಾವ ಅಚ್ಚರಿಯೂ ಉಂಟಾಗಿಲ್ಲ ಎಂದು ಹೇಳಿದರು. ಇದೇ ಥಾಕುರ್ತಾ ಯೋಜನೆಯ ನೇತೃತ್ವವನ್ನು ವಹಿಸಿಕೊಂಡು,ನಗರದ ದುರ್ಗಾಪೂಜೆಯನ್ನು ಯುನೆಸ್ಕೋದ ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಲು ಶ್ರಮಿಸಿದ್ದರು. ಯುನೆಸ್ಕೋಗೆ ಕಳುಹಿಸಲಾಗಿದ್ದ ನಾಮನಿರ್ದೇಶನ ದಸ್ತಾವೇಜನ್ನು ಅವರೇ ಸ್ವತಃ ಸಿದ್ಧಗೊಳಿಸಿದ್ದರು.

‘ನನಗೇನೂ ಆಶ್ಚರ್ಯವಾಗಿಲ್ಲ,ಎಷ್ಟೆಂದರೂ ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರ ಒಳ್ಳೆಯ ಕೆಲಸಗಳ ಹೆಗ್ಗಳಿಕೆಯನ್ನು ರಾಜಕಾರಣಿಗಳು ಪಡೆದುಕೊಳ್ಳುತ್ತಾರೆ. ಆದರೆ ಯೋಜನೆಯ ಯಶಸ್ಸಿನ ಬಳಿಕ ಸಂಸ್ಕೃತಿ ಸಚಿವಾಲಯದ ಯಾರೊಬ್ಬರೂ ನನಗೆ ಧನ್ಯವಾದ ಪತ್ರವನ್ನು ಬರೆಯುವ ಕನಿಷ್ಠ ಸೌಜನ್ಯವನ್ನೂ ತೋರಿಸಲಿಲ್ಲ ಎನ್ನುವದು ನಿಜಕ್ಕೂ ದುರದೃಷ್ಟಕರವಾಗಿದೆ ’ಎಂದು ಥಾಕುರ್ತಾ ಹೇಳಿದರು.
ಆಕ್ಸ್ಫರ್ಡ್ ವಿವಿಯಿಂದ ಡಿಫಿಲ್ ಪಡೆದಿರುವ ಕೋಲ್ಕತಾದ ಸಮಾಜ ವಿಜ್ಞಾನ ಕೇಂದ್ರದ ಮಾಜಿ ನಿರ್ದೇಶಕಿ ಮತ್ತು ಪ್ರೊಫೆಸರ್ ಆಗಿರುವ ಥಾಕುರ್ತಾ ತನ್ನ ಜೀವನದುದ್ದಕ್ಕೂ ಸಾಂಸ್ಕೃತಿಕ ಇತಿಹಾಸ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. 2015ರಲ್ಲಿ ಅವರು ದೇವಿಯ ಹೆಸರಿನಲ್ಲಿ.ಸಮಕಾಲೀನ ಕೋಲ್ಕತಾದ ದುರ್ಗಾಪೂಜೆಗಳು’ ಎಂಬ ಪುಸ್ತಕವನ್ನು ಬರೆದಿದ್ದರು.

‘ನಾನು ಹಿಂದೆ ದುರ್ಗಾಪೂಜೆಯ ಕುರಿತು ಕೆಲಸ ಮಾಡಿದ್ದರಿಂದ ಕೇಂದ್ರ ಸಂಸ್ಕೃತಿ ಸಚಿವಾಲಯವು 2018ರಲ್ಲಿ ಯೋಜನೆಯೊಂದಿಗೆ ನನ್ನನ್ನು ಸಂಪರ್ಕಿಸಿತ್ತು, ಹಿಂದೊಮ್ಮೆ ದುರ್ಗಾಪೂಜೆಗೆ ಯುನೆಸ್ಕೋ ಟ್ಯಾಗ್ ಪಡೆಯುವ ಇದೇ ಯೋಜನೆ ವಿಫಲಗೊಂಡಿತ್ತು. ಹೀಗಾಗಿ ಈ ಸಲ ಯಾವುದೇ ವೈಫಲ್ಯಕ್ಕೆ ಅವಕಾಶ ನೀಡಲು ಅವರು ಬಯಸಿರಲಿಲ್ಲ. ದುರ್ಗಾ ಪೂಜೆಯು ಪ.ಬಂಗಾಳದ ಜನರ ಜೀವನದಲ್ಲಿ ಬಹು ದೊಡ್ಡ ಉತ್ಸವವಾಗಿದೆ ಮತ್ತು ಕೇಂದ್ರದಲ್ಲಿಯ ಆಡಳಿತ ಪಕ್ಷವು ರಾಜ್ಯದಲ್ಲಿ ರಾಜಕೀಯ ಲಾಭಕ್ಕಾಗಿ ನೋಡುತ್ತಿದೆ’ ಎಂದು ಥಾಕುರ್ತಾ ಹೇಳಿದರು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News