‘ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣ’ ಎಲ್ಲಿದೆ?

Update: 2022-10-04 05:19 GMT

ಮಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ ಹೊರಡುವ 9,10,11,23 ಹಾಗೂ 61 ನಂಬ್ರದ ಖಾಸಗಿ ಸಿಟಿ ಬಸ್ಸುಗಳು ತಮ್ಮ ಹಿಂದೆ ಹಾಗೂ ಮುಂದಿರುವ ಸೂಚನಾ ಫಲಕಗಳಲ್ಲಿ ‘ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣ’ ಎಂದು ಬರೆದಿವೆ. ಈ ಹೆಸರಿನ ಯಾವುದೇ ರೈಲು ನಿಲ್ದಾಣವು ಮಂಗಳೂರಿನಲ್ಲಿ ಇಲ್ಲ.
ಕೇಂದ್ರ ಸರಕಾರದ ರೈಲ್ವೆ ಸಚಿವಾಲಯವು ತನ್ನ ರೈಲು ನಿಲ್ದಾಣಕ್ಕೆ ನೀಡಿದ ಹೆಸರನ್ನು ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಸಿಟಿ ಬಸ್‌ಗಳು ಇನ್ನೂ ಬದಲಾಯಿಸದಿರುವುದು ವಿಷಾದದ ಸಂಗತಿ.
ಪ್ರಸಕ್ತ ಮಂಗಳೂರು ಸರಹದ್ದಿನಲ್ಲಿರುವ ಪಡೀಲ್ ಎಂಬಲ್ಲಿ ‘ಮಂಗಳೂರು ಜಂಕ್ಷನ್ ರೈಲು ನಿಲ್ದಾಣ’ ಹಾಗೂ ಮಿಲಾಗ್ರಿಸ್ ಚರ್ಚ್ ಹಿಂದುಗಡೆಯಿರುವ ‘ಮಂಗಳೂರು ಸೆಂಟ್ರಲ್’ ಹೆಸರಿನ ರೈಲು ನಿಲ್ದಾಣಗಳಿವೆ. ಆದರೆ ಕಂಕನಾಡಿಯಲ್ಲಿ ಕಂಕನಾಡಿ ಜಂಕ್ಷನ್ ಹೆಸರಿನ ರೈಲು ನಿಲ್ದಾಣವಿಲ್ಲ.
ಉತ್ತರ ಭಾರತದ ಜಮ್ಮು, ಅಮೃತಸರ, ದಿಲ್ಲಿ, ರಾಜಸ್ಥಾನ ಹಾಗೂ ಗುಜರಾತ್‌ನಿಂದ ಕೊಂಕಣ ರೈಲ್ವೆ ಮಾರ್ಗವಾಗಿ ತೆರಳುವ 32 ರೈಲುಗಳು ದಕ್ಷಿಣ ಭಾರತದ ಕೇರಳ ಹಾಗೂ ತಮಿಳುನಾಡಿಗೆ ಹೋಗುತ್ತವೆ. ಇಷ್ಟೇ ಸಂಖ್ಯೆಯ ರೈಲುಗಳು ‘ಮಂಗಳೂರು ಜಂಕ್ಷನ್ ರೈಲು ನಿಲ್ದಾಣ’ದಿಂದ ಉತ್ತರ ಭಾರತಕ್ಕೂ ಹೋಗುತ್ತವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳು, ಎಂಆರ್‌ಪಿಎಲ್, ಬಿಎಎಸ್‌ಎಫ್, ನವಮಂಗಳೂರು ಬಂದರು ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ನೌಕರಿಗೋಸ್ಕರ ಜನರು ಉತ್ತರ ಭಾರತದಿಂದ ಬರುತ್ತಾರೆ. ಆದರೆ ಉತ್ತರ ಭಾರತದಿಂದ ಬರುವ 32 ರೈಲುಗಳು ಕೂಡ ನಗರದ ಹೃದಯ ಭಾಗದಲ್ಲಿರುವ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಾರದೆ; ಮಂಗಳೂರು ಜಂಕ್ಷನ್ ನಿಲ್ದಾಣದ ಮೂಲಕ ಹಾದು ಹೋಗಿ ಕೇರಳದ ಕಡೆ ಪ್ರಯಾಣ ಬೆಳೆಸುತ್ತವೆ. ಹೀಗೆ ನೌಕರಿ ಹಾಗೂ ವಿದ್ಯಾಭ್ಯಾಸಕ್ಕಾಗಿ ಉತ್ತರ ಭಾರತದಿಂದ ಬರುವವರಿಗೆ ಮಂಗಳೂರಿನಲ್ಲಿ ಇಳಿಯಲು ಸುಲಭವಾಗಿ ಗುರುತಿಸಲು ಈ ಹಿಂದೆ ಕಂಕನಾಡಿ ಎಂದು ಹೆಸರಿದ್ದ ನಿಲ್ದಾಣವನ್ನು ‘ಮಂಗಳೂರು ಜಂಕ್ಷನ್’ ಎಂದು ಮರುನಾಮಕರಣ ಮಾಡಿದ್ದರು. ಆದರೂ ನಗರದ ಖಾಸಗಿ ಬಸ್ಸುಗಳಲ್ಲಿ ಇನ್ನೂ ಹೆಸರು ಬದಲಾಯಿಸದ ಕಾರಣ ಹೊಸದಾಗಿ ಪ್ರಯಾಣಿಸುವ ಹಿರಿಯ ನಾಗರಿಕರೂ ಸೇರಿ ಹೆಚ್ಚಿನ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿ, ಅವರು ‘ಮಂಗಳೂರು ಜಂಕ್ಷನ್’ನಲ್ಲಿ ಇಳಿಯಬೇಕಾದವರು ಕಂಕನಾಡಿಯಲ್ಲಿ ಇಳಿದು ಆನಂತರ ಹಣ ಖರ್ಚು ಮಾಡಿ ರಿಕ್ಷಾ ಮೂಲಕ ‘ಮಂಗಳೂರು ಜಂಕ್ಷನ್’ ತಲುಪುವಾಗ ಅವರು ಪ್ರಯಾಣಿಸಬೇಕಾದ ರೈಲು ಹೊರಟಿರುತ್ತದೆ. ಹೀಗಾಗಿ ಹಲವು ಪ್ರಯಾಣಿಕರು ರೈಲುತಪ್ಪಿಸಿಕೊಳ್ಳುವುದು ನಡೆಯುತ್ತಿದೆ. ಹಾಗಾಗಿ ಸಂಬಂಧಪಟ್ಟವರು ಇನ್ನಾದರೂ ಈ ಸಮಸ್ಯೆಯ ಬಗ್ಗೆ ಕೂಡಲೇ ಗಮನಹರಿಸಿ ಬಸ್ಸುಗಳಲ್ಲಿ ಸರಿಯಾದ ಹೆಸರು ಬರುವಂತೆ ಮಾಡಿ ರೈಲು ಪ್ರಯಾಣಿಕರ ಬವಣೆ ತಪ್ಪಿಸಬೇಕಾಗಿದೆ.
 

Writer - ಅಮೃತ್ ಪ್ರಭು, ಮಂಗಳೂರು

contributor

Editor - ಅಮೃತ್ ಪ್ರಭು, ಮಂಗಳೂರು

contributor

Similar News