ಪ್ರಧಾನಿಯ ಹಿಮಾಚಲ ಪ್ರದೇಶ ಕಾರ್ಯಕ್ರಮಗಳ ವರದಿ ಮಾಡುವ ಪತ್ರಕರ್ತರಿಗೆ ಸನ್ನಡತೆ ಪ್ರಮಾಣಪತ್ರ ಕಡ್ಡಾಯ!

Update: 2022-10-04 08:02 GMT
ಪ್ರಧಾನಿ ನರೇಂದ್ರ ಮೋದಿ (File Photo: PTI)

ಹೊಸದಿಲ್ಲಿ: ಹಿಮಾಚಲ ಪ್ರದೇಶಕ್ಕೆ ಬುಧವಾರ ಒಂದು ದಿನದ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯ(Prime Minister Narendra Modi) ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸೆಕ್ಯುರಿಟಿ ಪಾಸ್‍ಗಳನ್ನು ಪಡೆಯಬೇಕಿದ್ದರೆ ಎಲ್ಲಾ ಪತ್ರಕರ್ತರಿಗೆ (Journalists) ಸನ್ನಡತೆಯ ಪ್ರಮಾಣಪತ್ರಗಳನ್ನು (character certificates) ಹಾಜರುಪಡಿಸುವಂತೆ ಕೇಳಲಾಗಿದೆ. ಜಿಲ್ಲಾಡಳಿತದ ಈ ಆದೇಶ ರಾಜ್ಯದಲ್ಲಿ ವಿವಾದಕ್ಕೀಡಾಗಿದೆ ಎಂದು indiatoday.in ವರದಿ ಮಾಡಿದೆ.

ಖಾಸಗಿ ಸುದ್ದಿ ಸಂಸ್ಥೆಗಳು ಮಾತ್ರವಲ್ಲದೆ ಆಲ್ ಇಂಡಿಯಾ ರೇಡಿಯೋ, ದೂರದರ್ಶನದಂತಹ ಸರಕಾರಿ ಒಡೆತನದ ಮಾಧ್ಯಮ ಸಂಸ್ಥೆಗಳ ಪತ್ರಕರ್ತರಿಗೂ ಈ ಪ್ರಮಾಣಪತ್ರ ಹಾಜರುಪಡಿಸುವಂತೆ ಹೇಳಲಾಗಿದೆ.

ಈ ಕುರಿತಂತೆ ಪೊಲೀಸರು ಕೂಡ ಸೆಪ್ಟೆಂಬರ್ 29 ರಂದು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಎಲ್ಲಾ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಎಲ್ಲಾ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು ಹಾಗೂ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ತಂಡದ ಸದಸ್ಯರ ಪಟ್ಟಿ ಹಾಗೂ ಅವರ ಕ್ಯಾರೆಕ್ಟರ್ ಪ್ರಮಾಣಪತ್ರ ಒದಗಿಸಲು ಸೂಚಿಸಲಾಗಿದೆ. ಈ ಪ್ರಮಾಣಪತ್ರಗಳನ್ನು ಅಕ್ಟೋಬರ್ 1ರೊಳಗೆ ಬಿಲಾಸ್ಪುರ್ ಸಿಐಡಿ ಡಿವೈಎಸ್ಪಿ ಅವರಿಗೆ ನೀಡುವಂತೆ ಸೂಚಿಸಲಾಗಿದೆ. ಪ್ರಧಾನಿಯ ಬಿಲಾಸ್ಪುರ್ ರ್ಯಾಲಿಗೆ ಯಾರು ಪ್ರವೇಶ ಪಡೆಯಬಹುದು ಎಂದು ಈ ಕಚೇರಿ ನಿರ್ಧರಿಸಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಜಿಲ್ಲಾಡಳಿತದ ಕ್ರಮವನ್ನು ಆಪ್ ಹಾಗೂ ಕಾಂಗ್ರೆಸ್ ಪಕ್ಷ ಟೀಕಿಸಿವೆ. ಬಿಲಾಸ್ಪುರ್ ರ್ಯಾಲಿ ಹೊರತಾಗಿ ಏಮ್ಸ್ ಕ್ಯಾಂಪಸ್ ಅನ್ನು ಪ್ರಧಾನಿ ಉದ್ಘಾಟಿಸಲಿದ್ದು ಕುಲ್ಲು ದಸರಾ ಸಂಭ್ರಮಾಚರಣೆಯಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ ರವೀಶ್ ಕುಮಾರ್: NDTV ಭವಿಷ್ಯದ ಬಗ್ಗೆ ಮತ್ತೆ ಬಿಸಿಬಿಸಿ ಚರ್ಚೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News