ಉಡುಪಿ: ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ

Update: 2022-10-04 10:27 GMT

ಉಡುಪಿ, ಸೆ.4: ಜಾಗತೀಕರಣದಿಂದ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿದ್ದು, ಇದರಿದ ಅನೇಕ ಪದ್ಧತಿ, ಸಂಪ್ರದಾಯ, ರೀತಿ-ನೀತಿ, ಹಬ್ಬ-ಹರಿದಿನದ ಔಚಿತ್ಯ ಸಂಪೂರ್ಣ ಅವಸಾನಗೊಂಡಿದೆ. ಇದರೊಂದಿಗೆ ನಮಗೆ ಸಮಯ ಸದ್ವಿನಿಯೋಗ ಮಾಡುವ ಯಾವುದೇ ಪರಿಪಾಠ ಶಾಲೆಯಲ್ಲಿ ಸಿಗುತ್ತಿಲ್ಲ. ಇಂತಹ ಪ್ರವೃತ್ತಿಯನ್ನು ಬೆಳೆಸುವ ಪ್ರಯತ್ನವೇ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ ಆಗಿದೆ.ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಮತ್ತು ಹೊಂದಾಣಿಕೆ ಮನೋಭಾವನೆ ಬೆಳೆದು ಸೌಹಾರ್ದತೆ ಬೆಳೆಯುತ್ತದೆ ಎಂದು ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಅಧ್ಯಕ್ಷ ವಸಂತ್ ಶೆಟ್ಟಿ ಹೇಳಿದ್ದಾರೆ.

ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು ಹಂಗಾರಕಟ್ಟೆ, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ವೆ, ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಲಯನ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ರಾಜೇಂದ್ರ ಕಿಣಿ ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಗಣಪು ನಾಯ್ಕ್ ವಹಿಸಿದ್ದರು.

ಸಭೆಯಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಜಯರಾಮ್ ಶೆಟ್ಟಿ, ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ, ಬಾಬು ಶೆಟ್ಟಿ, ಬೆಳ್ವೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ, ಶಿಕ್ಷಕಿಯರಾದ ಚಂದ್ರಕಲಾ, ಬೆಳ್ವೆಯಉದ್ಯಮಿ ಮಹಮ್ಮದ್ ಮುಸ್ತಾಕ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅನಿಶಾ ಪೇತ್ರಿ ಉದ್ಘಾಟಿಸಿದರೆ, ಮುಖ್ಯ ಶಿಕ್ಷಕಿ ಜಯಶ್ರೀ ಸ್ವಾಗತಿಸಿದರು. ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಪ್ರಾಸಾವಿಕ ಮಾತುಗಳನ್ನಾಡಿದರು. 68 ಮಂದಿ ವಿದ್ಯಾರ್ಥಿ ಗಳು ಶಿಬಿರದ ಪ್ರಯೋಜನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News