ಗರ್ಬಾ ಪೆಂಡಾಲ್‌ ಮೇಲೆ ಕಲ್ಲು ತೂರಾಟ ಆರೋಪ: ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಿದ ಅಧಿಕಾರಿಗಳು

Update: 2022-10-04 17:15 GMT

ಭೋಪಾಲ್: ಎರಡು ಗುಂಪುಗಳ ನಡುವಿನ ಘರ್ಷಣೆ ಬಳಿಕ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಗರ್ಬಾ ಪೆಂಡಾಲ್‌ ಮೇಲೆ ಕಲ್ಲು ತೂರಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಕುರಿತು 19 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರಲ್ಲಿ ಮೂವರ ಮನೆಗಳನ್ನು ಅಧಿಕಾರಿಗಳು "ಅಕ್ರಮ" ಎಂದು ಧ್ವಂಸಗೊಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ರಾಜ್ಯ ರಾಜಧಾನಿಯಿಂದ ಸುಮಾರು 345 ಕಿಮೀ ದೂರದಲ್ಲಿರುವ ಮಂಡ್‌ಸೌರ್ ಜಿಲ್ಲೆಯ ಸಿತಾಮೌ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ಜನಿ ಗ್ರಾಮದಲ್ಲಿ ಅಕ್ಟೋಬರ್ 2 ರಂದು ರಾತ್ರಿ ಕಲ್ಲು ತೂರಾಟ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಎರಡು ಗುಂಪುಗಳ ನಡುವಿನ ಜಗಳದ ಬಳಿಕ ಗರ್ಬಾ ಪೆಂಡಾಲ್ ಮೇಲೆ ಕಲ್ಲು ತೂರಾಟ ನಡೆದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅನುರಾಗ್ ಸುಜಾನಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

19 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯ ನಂತರ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.‌ ಅವರಲ್ಲಿ ಕೆಲವು ಆರೋಪಿಗಳು ಇತರೆ ಪ್ರಕರಣದಲ್ಲಿ ಅಪರಾಧಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಆರೋಪಿಗಳ ಪೈಕಿ ಮೂವರಿಗೆ ಸೇರಿದ 4.5 ಕೋಟಿ ರೂ.ಗೂ ಹೆಚ್ಚು ಮೌಲ್ಯದ 4,500 ಚದರ ಅಡಿಗೂ ಹೆಚ್ಚು ವ್ಯಾಪ್ತಿಯ ಅಕ್ರಮ ಕಟ್ಟಡವನ್ನು ಕಂದಾಯ ಇಲಾಖೆಯ ನೆರವಿನೊಂದಿಗೆ ಮಂಗಳವಾರ ನೆಲಸಮಗೊಳಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

307 (ಕೊಲೆ ಯತ್ನ) ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ  ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಸಲ್ಮಾನ್ ಎಂಬ ವ್ಯಕ್ತಿ ಮೋಟಾರ್‌ ಬೈಕ್‌ನಲ್ಲಿ ವೀಲಿಂಗ್‌ ಮಾಡುತ್ತಿದ್ದ ವೇಳೆ, ಮತ್ತೊಂದು ಗುಂಪಿಗೆ ಸೇರಿದ ವ್ಯಕ್ತಿ ಅದನ್ನು ತಡೆದು ಪ್ರಶ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ, ಸಲ್ಮಾನ್ ಮತ್ತು ಅವನ ಸಹಚರರು ಜಗಳವಾಡಿದ ವ್ಯಕ್ತಿಯನ್ನು ಹುಡುಕಲು ಗರ್ಬಾ ಸ್ಥಳಕ್ಕೆ ತಲುಪಿದ್ದಾರೆ, ಅಲ್ಲಿ ಪರಿಸ್ಥಿತಿಯು ಉದ್ವಿಗ್ನತೆಗೆ ತಿರುಗಿದ್ದು, ಕಲ್ಲು ತೂರಾಟಕ್ಕೆ ಕಾರಣವಾಯಿತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News