ಕಬಕದಲ್ಲಿ ಕೆಎಸ್‌ಸಿಎಗೆ 23.25 ಎಕರೆ ಕಂದಾಯ ಜಮೀನು

Update: 2022-10-06 07:35 GMT
 ಜಮೀನು :ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.5: ಕಾನೂನು ಇಲಾಖೆಯ ಅಸಮ್ಮತಿಯ ಹೊರತಾಗಿಯೂ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ 23.25 ಎಕರೆ ಸರಕಾರಿ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಕೆಎಸ್‌ಸಿಎ)ಗೆ ಗುತ್ತಿಗೆ ನೀಡಲು ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ. ಕಬಕ ಗ್ರಾಮದಲ್ಲಿ ಸರಕಾರದ ವಶದಲ್ಲಿರುವ 39.23 ಎಕರೆ ಜಮೀನಿನ ಪೈಕಿ 23.25 ಎಕರೆಯನ್ನು ಕೆಎಸ್‌ಸಿಎಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅವಕಾಶವಿಲ್ಲ ಎಂದು ಕಾನೂನು ಇಲಾಖೆ ಅಸಮ್ಮತಿ ವ್ಯಕ್ತಪಡಿಸಿದೆ. ಆದರೆ ಕಾನೂನು ಇಲಾಖೆಯ ಈ ಅಭಿಪ್ರಾಯವನ್ನು ಬದಿಗೊತ್ತಿ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ. ಕೆಎಸ್‌ಸಿಎ ವತಿಯಿಂದ ಮೈಸೂರಿನಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 19 ಎಕರೆ ಭೂಮಿ ನೀಡುವ ಸಂಬಂಧದ ಪ್ರಸ್ತಾವವನ್ನು ಸಚಿವ ಸಂಪುಟಕ್ಕೆ ಮಂಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿರುವ ಬೆನ್ನಲ್ಲೇ ಕಬಕ ಗ್ರಾಮದಲ್ಲಿ ಇದೇ ಸಂಸ್ಥೆಗೆ 23.25 ಎಕರೆ ಗುತ್ತಿಗೆ ನೀಡಲು ಕಾನೂನು ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿರುವುದು ಮುನ್ನೆಲೆಗೆ ಬಂದಿದೆ. ಕಂದಾಯ ಇಲಾಖೆ ಸಲ್ಲಿಸಿರುವ ಸಚಿವ ಸಂಪುಟ ಟಿಪ್ಪಣಿಯು ‘The-file

’ಗೆ ಲಭ್ಯವಾಗಿದೆ. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ನಾನಾ ಯೋಜನೆ ಜಾರಿಗೊಳಿಸಲು ಅಥವಾ ವಸತಿ ರಹಿತರಿಗೆ ವಸತಿ ನೀಡಲು ಜಮೀನು ಕೊರತೆಯಿದೆ. ಆದರೆ ಈ ಸಂಬಂಧ ತಾಲೂಕು ಆಡಳಿತವು ಕಂದಾಯ ಜಮೀನು ಗುರುತಿಸಿರಲಿಲ್ಲ. ಆದರೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಉದ್ದೇಶಕ್ಕೆ 23.25 ಎಕರೆ ಜಮೀನು ನೀಡಲು ಕಂದಾಯ ಇಲಾಖೆ ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಹೋಬಳಿಯ

ಕಬಕ ಗ್ರಾಮದಲ್ಲಿ ಸರಕಾರದ ವಶದಲ್ಲಿ 39.23 ಎಕರೆ ಜಮೀನು ಇದೆ. ಇಲ್ಲಿ ಎಕರೆಯೊಂದಕ್ಕೆ ಮಾರ್ಗಸೂಚಿ ಮೌಲ್ಯ ನಾಲ್ಕು ಲಕ್ಷ ರೂ. ಇದೆ. ಆ ಪ್ರಕಾರ 23.25 ಎಕರೆಗೆ 93,00,000 ರೂ.ಗಳಾಗಲಿದೆ. ಈ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಜಮೀನಿನ ಮಾರ್ಗಸೂಚಿ ಮೌಲ್ಯದ ಶೇ.2.50ರಂತೆ ವಾರ್ಷಿಕ ಗುತ್ತಿಗೆ ಮೊತ್ತವನ್ನು ವಿಧಿಸಿ ಮಂಜೂರು ಮಾಡಲು ಕಂದಾಯ ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಆದರೆ ಈ ಸಂಬಂಧ ಕಾನೂನು ಇಲಾಖೆ ಅಸಮ್ಮತಿ ವ್ಯಕ್ತಪಡಿಸಿದೆ. ‘ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಖಾಸಗಿ ಸಂಸ್ಥೆ ಆಗಿರುವುದರಿಂದ ನಿಯಮ 19ರ ಅಡಿ ಜಮೀನು ಗುತ್ತಿಗೆ ನೀಡಲು ಅವಕಾಶವಿಲ್ಲ. ಕರ್ನಾಟಕ ಭೂ ಮಂಜೂರಾತಿ ನಿಯಮ 22ಎ(2)ರಲ್ಲಿ ನಗರ ಪೌರ ವ್ಯಾಪ್ತಿಯಲ್ಲಿ ಉದ್ದೇಶಿತ ಮಂಜೂರಾತಿ ಜಮೀನು ಬರುವುದಾದಲ್ಲಿ ಅಂತಹ ಜಮೀನನ್ನು ಮಂಜೂರು ಮಾಡಬಾರದೆಂದು ಸ್ಪಷ್ಟಪಡಿಸಿದೆ. ಪ್ರಸಕ್ತ ಪ್ರಕರಣದಲ್ಲಿ ಜಮೀನು ನಗರ ಪೌರ ವ್ಯಾಪ್ತಿಯಿಂದ ಕೇವಲ 4.50 ಕಿ.ಮೀ. ದೂರದಲ್ಲಿರುವುದರಿಂದ ಮಂಜೂರಾತಿಗೆ ಅವ ಕಾಶವಿಲ್ಲ’ ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯ ನೀಡಿದೆ. ಅಲ್ಲದೇ ಇದೇ ಅಭಿಪ್ರಾಯದಲ್ಲಿ ‘ಭೂ ಮಂಜೂರಾತಿ ನಿಯಮ ಗಳಲ್ಲಿ ಏನೇ ನಿಯಮಾವಳಿಗಳ ಅಡೆತಡೆಗಳಿದ್ದಾಗ್ಯೂ ಸರಕಾರವು ನಿಯಮ 27ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಯುಕ್ತ ಸಂದರ್ಭಗಳಲ್ಲಿ ನಿಯಮಗಳನ್ನು ಸಡಿಲಿಸಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದೂ ಪ್ರಸ್ತಾವಿಸಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News