ಮ್ಯಾನ್ಮಾರ್: ಜಪಾನ್ ಚಲನಚಿತ್ರ ನಿರ್ಮಾಪಕನಿಗೆ 10 ವರ್ಷ ಜೈಲುಶಿಕ್ಷೆ

Update: 2022-10-06 17:22 GMT

ಯಾಂಗಾನ್,ಅ.6: ಮಿಲಿಟರಿ ಆಡಳಿತದ ವಿರುದ್ಧ ಜನರಲ್ಲಿ ಭಿನ್ನಾಭಿಪ್ರಾಯವನ್ನು ಪ್ರೋತ್ಸಾಹಿಸಿದ ಮತ್ತು ಎಲೆಕ್ಟ್ರಾನಿಕ್ಸ್ ಸಂವಹನ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಮ್ಯಾನ್ಮಾರ್ನ ಸೇನಾಡಳಿತ ಜಪಾನ್ನ ಚಲನಚಿತ್ರ ನಿರ್ಮಾಪಕ ಟೊರು ಕುಬೊಟಾಗೆ 10 ವರ್ಷದ ಜೈಲುಶಿಕ್ಷೆ ವಿಧಿಸಿದೆ ಎಂದು ಜಪಾನ್ನ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

  ಮ್ಯಾನ್ಮಾರ್ ನಲ್ಲಿಕಳೆದ ವರ್ಷದ ಫೆಬ್ರವರಿಯಲ್ಲಿ ಆಂಗ್ಸಾನ್ ಸೂಕಿ ಅವರ ಸರಕಾರವನ್ನು ಕ್ಷಿಪ್ರಕ್ರಾಂತಿಯಲ್ಲಿ ಪದಚ್ಯುತಗೊಳಿಸಿ ಸೇನೆಯು ಆಡಳಿತವನ್ನು ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆಯನ್ನು ನಿರ್ದಯವಾಗಿ ಹತ್ತಿಕ್ಕಲು ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ಹತರಾಗಿದ್ದಾರೆ. ಜುಲೈಯಲ್ಲಿ ಯಾಂಗಾನ್ನಲ್ಲಿ ನಡೆದಿದ್ದ ಸರಕಾರ ವಿರೋಧಿ ಪ್ರತಿಭಟನಾ ಸ್ಥಳದ ಸಮೀಪದಿಂದ ಕುಬೊಟಾರನ್ನು ಮ್ಯಾನ್ಮಾರ್ನ ಇಬ್ಬರು ಪ್ರಜೆಗಳೊಂದಿಗೆ ಬಂಧಿಸಲಾಗಿತ್ತು. ಮಿಲಿಟರಿ ವಿರುದ್ಧ ಭಿನ್ನಾಭಿಪ್ರಾಯವನ್ನು ಪ್ರೋತ್ಸಾಹಿಸಿದ ಮತ್ತು ವಲಸೆ ನಿಯಮವನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರ ವಿರುದ್ಧ ಆರಂಭದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಭಿನ್ನಾಭಿಪ್ರಾಯಕ್ಕೆ ಪ್ರೋತ್ಸಾಹ ನೀಡಿದ ಪ್ರಕರಣದಲ್ಲಿ ಕುಬೊಟಾಗೆ ಶಿಕ್ಷೆಯಾಗಿದೆ. ವಲಸೆ ನಿಯಮ ಉಲ್ಲಂಘಿಸಿದ ಪ್ರಕರಣದ ಮುಂದಿನವಿಚಾರಣೆ ಅ.12ರಂದು ನಡೆಯಲಿದೆ ಎಂದು ಮೂಲಗಳು ಹೇಳಿವೆ. ಮ್ಯಾನ್ಮಾರ್ನ ರೊಹಿಂಗ್ಯಾ ಅಲ್ಪಸಂಖ್ಯಾತರ ಬಗ್ಗೆ, ಮ್ಯಾನ್ಮಾರ್ನಲ್ಲಿನ ನಿರಾಶ್ರಿತರು ಮತ್ತು ಜನಾಂಗೀಯ ಸಮಸ್ಯೆಗಳ ಬಗ್ಗೆ ಕುಬೊಟಾ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಮ್ಯಾನ್ಮಾರ್ ಜತೆ ಉತ್ತಮ ದ್ವಿಪಕ್ಷೀಯ ಬಾಂಧವ್ಯ ಹೊಂದಿರುವ ಜಪಾನ್, ಆ ದೇಶಕ್ಕೆ ಗರಿಷ್ಟ ಆರ್ಥಿಕ ನೆರವು ನೀಡುತ್ತಿದೆ. ಆದರೆ ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರ ವಿರುದ್ಧ ಮ್ಯಾನ್ಮಾರ್ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಖಂಡಿಸಿದ್ದ ಜಪಾನ್, ಮ್ಯಾನ್ಮಾರ್ ನ ಸೇನಾ ಸದಸ್ಯರಿಗೆ ನೀಡುತ್ತಿರುವ ತರಬೇತಿ ಕಾರ್ಯಕ್ರಮವನ್ನು ನಿಲ್ಲಿಸುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News