ಭಾರತದಲ್ಲಿ ಮುಸ್ಲಿಮರಿಗೆ ಅಮಾನವೀಯ ದೈಹಿಕ ಹಲ್ಲೆ

Update: 2022-10-07 18:15 GMT
Photo: ndtv.com

ಹೊಸದಿಲ್ಲಿ, ಅ. 7: ಕಾನೂನು ಉಲ್ಲಂಘಿಸಿದ ಆರೋಪಕ್ಕೆ ಒಳಗಾಗುವ ಮುಸ್ಲಿಮ್ ವ್ಯಕ್ತಿಗಳಿಗೆ ಭಾರತದಲ್ಲಿ ಅಧಿಕಾರಿಗಳು ಹೆಚ್ಚಾಗಿ ನಿಂದನೀಯವಾಗಿರುವ ಬರ್ಬರ ದೈಹಿಕ ಶಿಕ್ಷೆ ನೀಡುತ್ತಿದ್ದಾರೆ ಎಂದು ಸರಕಾರೇತರ ಸಂಸ್ಥೆ ‘ಹ್ಯೂಮನ್ ರೈಟ್ಸ್ ವಾಚ್’ ಶುಕ್ರವಾರ ಹೇಳಿದೆ. 

ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮುಸ್ಲಿಮ್ ವ್ಯಕ್ತಿಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಮೂರು ದಿನಗಳ ಬಳಿಕ ‘ಹ್ಯೂಮನ್ ರೈಟ್ಸ್ ವಾಚ್’ ಈ ಹೇಳಿಕೆ ನೀಡಿದೆ. ಅ.೩ರಂದು ನವರಾತ್ರಿ ಉತ್ಸವ ಸಂದರ್ಭ ಗರ್ಬಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಈ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. 

ವೀಡಿಯೊದಲ್ಲಿ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುವಂತೆ ವ್ಯಕ್ತಿಗಳಿಗೆ ಸೂಚಿಸುತ್ತಿರುವುದು, ಆನಂತರ ಅವರಿಗೆ ಥಳಿಸುತ್ತಾ ಖೇಡಾ ಪೊಲೀಸ್ ಬಸ್‌ನತ್ತ ಕರೆದೊಯ್ಯುತ್ತಿರುವುದು ಕಂಡು ಬಂದಿದೆ.ಪ್ರಕರಣದ ತನಿಖೆ ನಡೆಸಬೇಕೆಂಬ ಆದೇಶವನ್ನು ತಾನು ಸ್ವೀಕರಿಸಿದ್ದೇನೆ ಎಂದು ಖೇಡಾ ಪೊಲೀಸ್ ಅಧೀಕ್ಷಕ ರಾಜೇಶ್ ಗಾಧಿಯಾ ಅವರು ಹೇಳಿದ್ದಾರೆ. ಈ ಘಟನೆಯ ವೀಡಿಯೊವನ್ನು ಕೆಲವು ಸರಕಾರದ ಪರ ಟಿ.ವಿ. ವಾಹಿನಿಗಳು ಪ್ರಶಂಸಿವೆ ಎಂದು ‘ಹ್ಯೂಮನ್ ರೈಟ್ಸ್ ವಾಚ್’ ಆರೋಪಿಸಿದೆ. 

ಈ ವೀಡಿಯೊದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ವ್ಯಕ್ತವಾದ ಬಳಿಕವಷ್ಟೇ ಘಟನೆಯ ತನಿಖೆಗೆ ಪೊಲೀಸರು ಆದೇಶಿಸಿದ್ದಾರೆ ಎಂದು ಅದು ಹೇಳಿದೆ. ಕಾನೂನಿನ ನಿಯಮವನ್ನು ನಿರ್ಲಜ್ಜವಾಗಿ ನಿರ್ಲಕ್ಷಿಸುವ ಅಧಿಕಾರಿಗಳು ಮುಸ್ಲಿಮರ ವಿರುದ್ಧ ತಾರತಮ್ಯ ಹಾಗೂ ದಾಳಿ ಮಾಡಬಹುದು ಎಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸಿದ್ದಾರೆ ಎಂದು ‘ಹ್ಯೂಮನ್ ರೈಟ್ಸ್ ವಾಚ್’ನ ದಕ್ಷಿಣ ಏಶ್ಯ ನಿರ್ದೇಶಕಿ ಮೀನಾಕ್ಷಿ ಗಂಗುಲಿ ಅವರು ಹೇಳಿದ್ದಾರೆ. ನಿರ್ದಿಷ್ಟವಾಗಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮುಸ್ಲಿಮ್ ಆರೋಪಿಗಳ ಮನೆಗಳು ಹಾಗೂ ಸೊತ್ತುಗಳನ್ನು ನೆಲಸಮಗೊಳಿಸಿದ ಕುರಿತಂತೆ ಹ್ಯೂಮನ್ ರೈಟ್ಸ್ ವಾಚ್’ ಕಳವಳ ವ್ಯಕ್ತಪಡಿಸಿದೆ. 
ಕಟ್ಟಡಗಳು ಅಕ್ರಮ ಎಂದು ಪ್ರತಿಪಾದಿಸುವ ಮೂಲಕ ನೆಲ ಸಮ ಕಾರ್ಯಾಚರಣೆಯನ್ನು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ ಕಾರ್ಯಾಚರಣೆ ಹಾಗೂ ಹೇಳಿಕೆ ಮುಸ್ಲಿಮರಿಗೆ ಸಾಮೂಹಿಕ ಶಿಕ್ಷೆ ನೀಡುವ ಉದ್ದೇಶ ಹೊಂದಿತ್ತು ಎಂಬುದನ್ನು ಸೂಚಿಸಿದೆ ಎಂದು ಅದು ಹೇಳಿದೆ. ಇಂತಹ ನೆಲಸಮ ಕಾರ್ಯಾಚರಣೆ ದಿಲ್ಲಿ, ಮಧ್ಯಪ್ರದೇಶದ ಖರ್ಗಾಂವ್ ನಗರ, ಗುಜರಾತ್‌ನ ಆನಂದ್ ಹಾಗೂ ಸಬರ್‌ಕಾಂತ್ ಜಿಲ್ಲೆಗಳಲ್ಲಿ ನಡೆದಿದೆ ಎಂದು ‘ಹ್ಯೂಮನ್ ರೈಟ್ಸ್ ವಾಚ್’ ಗಮನ ಸೆಳೆದಿದೆ. ಪೊಲೀಸರು ಬಲ ಪ್ರಯೋಗಿಸಿದ ಪರಿಣಾಮ ಜಾರ್ಖಂಡ್‌ನಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟ ಬಗ್ಗೆ ಕೂಡ ಅದು ಗಮನ ಸೆಳೆದಿದೆ. 

‘‘ತಾರತಮ್ಯದ ಕಾನೂನು, ನೀತಿ ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿದ ಕ್ರಮವನ್ನು ಹಿಂಪಡೆಯಲು ಭಾರತ ಸರಕಾರ ಕೂಡಲೇ ಕ್ರಮ ತೆಗೆದುಕೊಳ್ಳದೇ ಇದ್ದರೆ, ಕಾನೂನು ನಿಯಮದ ಸ್ಥಾನದಲ್ಲಿ ಬಲ್ಡೋಜರ್ ಹಾಗೂ ದೊಣ್ಣೆಗಳು ಸ್ಥಾನ ಪಡೆದುಕೊಳ್ಳಲಿವೆ’’ ಎಂದು ಹ್ಯೂಮನ್ ರೈಟ್ಸ್ ವಾಚ್’ ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News