ಉಯ್ಗರ್ ಮುಸ್ಲಿಮರ ಮಾನವ ಹಕ್ಕುಗಳನ್ನು ಖಾತರಿಪಡಿಸಬೇಕು: UNHRC ಮತದಾನದಿಂದ ದೂರ ಉಳಿದ ಒಂದು ದಿನದ ಬಳಿಕ ಭಾರತ ಒತ್ತಾಯ

Update: 2022-10-07 14:09 GMT


ಹೊಸದಿಲ್ಲಿ: ಕ್ಸಿನ್‌ಜಿಯಾಂಗ್‌ನ (ಉಯ್ಗರ್ ) ಜನರ ಮಾನವ ಹಕ್ಕುಗಳನ್ನು "ಗೌರವಿಸಬೇಕು ಮತ್ತು ಖಾತರಿಪಡಿಸಬೇಕು" ಎಂದು ಭಾರತ ಹೇಳಿದೆ, ಈ ವಿಷಯದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಕರಡು ನಿರ್ಣಯದ ಮೇಲೆ ಮತದಾನದಿಂದ ದೂರ ಉಳಿದ ಒಂದು ದಿನದ ನಂತರ ಭಾರತದ ಈ ಹೇಳಿಕೆ ಹೊರಬಂದಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, ಯುಎನ್‌ಎಚ್‌ಆರ್‌ಸಿಯಲ್ಲಿ ಭಾರತದ ಮತದಾನವು ಅದರ ದೀರ್ಘಾವಧಿಯ ಸ್ಥಾನಕ್ಕೆ ಅನುಗುಣವಾಗಿದೆ ಎಂದು ಹೇಳಿದರು.

"ಭಾರತವು ಎಲ್ಲಾ ಮಾನವ ಹಕ್ಕುಗಳಿಗೆ ಬದ್ಧವಾಗಿದೆ. ಅಂತಹ ಸಮಸ್ಯೆಗಳನ್ನು ಎದುರಿಸಲು ಭಾರತವು ಸಂವಾದವನ್ನು ಬೆಂಬಲಿಸುತ್ತದೆ" ಎಂದು ಬಾಗ್ಚಿ ಹೇಳಿದ್ದಾರೆ.

"ಕ್ಸಿನ್‌ಜಿಯಾಂಗ್ ಉಯ್ಗರ್   ಸ್ವಾಯತ್ತ ಪ್ರದೇಶದ ಜನರ ಮಾನವ ಹಕ್ಕುಗಳನ್ನು ಗೌರವಿಸಬೇಕು ಮತ್ತು ಖಾತರಿಪಡಿಸಬೇಕು. ಸಂಬಂಧಪಟ್ಟವರು (ಚೀನಾ) ಪರಿಸ್ಥಿತಿಯನ್ನು ಪರಿಹರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಮಾನವಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪಾಶ್ಚಿಮಾತ್ಯ ದೇಶಗಳು ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿ (UNHRC)ಯಲ್ಲಿ ಮಂಡಿಸಿದ ನಿರ್ಣಯದ ಮೇಲಿನ ಮತದಾನದಿಂದ ಭಾರತ ಗುರುವಾರ ದೂರ ಉಳಿದಿತ್ತು.

ಪಾಶ್ಚಿಮಾತ್ಯ ದೇಶಗಳಿಗೆ ತೀವ್ರ ಹಿನ್ನಡೆ ಎಂದು ಬಣ್ಣಿಸಲಾದ ಈ ಪ್ರಕರಣದಲ್ಲಿ ಪಾಶ್ಚಿಮಾತ್ಯ ದೇಶಗಳು ಮಂಡಿಸಿದ್ದ ನಿರ್ಣಯ ತಿರಸ್ಕೃತಗೊಂಡಿದೆ. ನಿರ್ಣಯದ ಪರವಾಗಿ 17 ಹಾಗೂ ನಿರ್ಣಯದ ವಿರುದ್ಧವಾಗಿ 19 ಮತಗಳು ಚಲಾವಣೆಯಾಗಿದ್ದವು. 47 ಸದಸ್ಯ ದೇಶಗಳ ಮಂಡಳಿಯಲ್ಲಿ ಮತದಾನದಿಂದ ದೂರ ಉಳಿದ 11 ದೇಶಗಳ ಪೈಕಿ ಭಾರತವೂ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News