ದುರ್ಗಾಪೂಜೆ ವೇಳೆ ಪ್ರವಾಹದಲ್ಲಿ ಕೊಚ್ಚಿಹೋದವರನ್ನು ರಕ್ಷಿಸಿದ ಮೊಹಮ್ಮದ್ ಮಾಣಿಕ್‌

Update: 2022-10-07 15:02 GMT

ಕೊಲ್ಕತ್ತಾ: "ನಾನು ಅಲ್ಲಾಹನ ಹೆಸರಿನಲ್ಲಿ ನದಿಗೆ ಹಾರಿದೆ. ಅಲ್ಲಾಹು ಇದ್ದಾನೆ, ನನಗೆ ಈಜಲು ಗೊತ್ತು ಎಂದು ನಂಬಿದ್ದೆ.." ದುರ್ಗಾಪೂಜೆ ವೇಳೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಕನಿಷ್ಟ ಒಂಭತ್ತು ಮಂದಿಯನ್ನು ರಕ್ಷಿಸಿದ ಮೊಹಮ್ಮದ್ ಮಾಣಿಕ್‌ ಅವರ ಮಾತುಗಳಿವು. ಹದಗೆಡುತ್ತಿರುವ ಸೌಹಾರ್ದದ ಸುದ್ದಿಗಳ ನಡುವೆ ಬಂಗಾಳಕ್ಕೆ ಮಾತ್ರವಲ್ಲದೆ, ಇಡೀ ದೇಶಕ್ಕೆ ಈ ಘಟನೆ ಉದಾಹರಣೆಯಾಗಿ ನಿಂತಿದೆ. 

 ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಪುಟ್ಟ ಪಟ್ಟಣವಾದ ಪಶ್ಚಿಮ್ ತೇಶಿಮಾಲದ ಮೊಹಮ್ಮದ್  ಮಾಣಿಕ್ ಈಗ ಬಂಗಾಳದ ಹೀರೋ ಆಗಿ ಹೊರ ಹೊಮ್ಮಿದ್ದಾರೆ. ಜಲ್ಪೈಗುರಿಯ ಮಾಲ್ ಬಜಾರ್‌ನಲ್ಲಿರುವ ಅವರ ಮನೆ ಅತಿಥಿಗಳಿಂದ ತುಂಬಿದೆ, ಎಲ್ಲರೂ ಅವರನ್ನು ಅಭಿನಂದಿಸಲು ಬರುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜೀವದ ಹಂಗು ತೊರೆದು ಧುಮ್ಮಿಕ್ಕುವ ನದಿಗೆ ಹಾರಿ ಹಿಂದೂ ಭಕ್ತಾದಿಗಳನ್ನು ರಕ್ಷಿಸಿದ ಮೊಹಮ್ಮದ್  ಮಾಣಿಕ್ ಅವರ ವಿಡಿಯೋ ವೈರಲ್‌ ಆದ ಬಳಿಕ ಜನರ ನಡುವೆ ಮಾಣಿಕ್‌ ಹೀರೋ ಆಗಿದ್ದಾರೆ. 
 
ದುರ್ಗಾಪೂಜೆಯ ಸಂದರ್ಭದಲ್ಲಿ ನದಿಯ ಹರಿವಿನ ಪ್ರಮಾಣ ಏಕಾಏಕಿ ಏರಿಕೆಯಾಗಿದ್ದು, ಪೂಜೆಗೆ ಬಂದವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.  ಆ ಸಮಯದಲ್ಲಿ ಎಲ್ಲರೂ ವಿಡಿಯೋ ಮಾಡುತ್ತಿದ್ದರೆ, ಪ್ರಾಣದ ಹಂಗಿಲ್ಲದೇ ಮೊಹಮ್ಮದ್  ಮಾಣಿಕ್ ತನ್ನ ಮೊಬೈಲ್ ಫೋನ್ ಅನ್ನು ಸ್ನೇಹಿತನಿಗೆ ಕೊಟ್ಟು ಏಕಾಏಕಿ ನದಿಗೆ ಹಾರಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮಾಣಿಕ್‌ ಅವರೊಬ್ಬರೇ ಮಕ್ಕಳು ಮಹಿಳೆಯರು ಸೇರಿದಂತೆ ಕನಿಷ್ಠ ಒಂಭತ್ತು ಮಂದಿಯನ್ನು ರಕ್ಷಿಸಿದ್ದಾರೆ ಎಂದು telegraphindia.com ವರದಿ ಮಾಡಿದೆ. 

 ಅದಾಗ್ಯೂ ದುರ್ಘಟನೆಯಲ್ಲಿ ಕನಿಷ್ಟ ಎಂಟು ಮಂದಿ ಮೃತ ಪಟ್ಟಿದ್ದಾರೆ. ಮಾಣಿಕ್‌ ರಂತಹ ಇನ್ನಷ್ಟು ಮಂದಿಯಿದ್ದರೆ ಇನ್ನಷ್ಟು ಜೀವಹಾನಿಗಳನ್ನು ತಡೆಯಬಹುದಿತ್ತು ಎಂದು ಅವರ ಸ್ನೇಹಿತ ಹೇಳಿದ್ದಾರೆ. 

ಮಾಣಿಕ್ ಅವರೊಂದಿಗೆ, ಸ್ಥಳದಲ್ಲಿ ನೆಲೆಸಿದ್ದ ಲೈಫ್‌ಜಾಕೆಟ್ ಧರಿಸಿದ ನಾಗರಿಕ ರಕ್ಷಣಾ ಸ್ವಯಂಸೇವಕರು ಕೂಡ ಜಿಗಿದಿದ್ದಾರೆ. ಅಗ್ನಿಶಾಮಕ ದಳವು ಶೀಘ್ರದಲ್ಲೇ ಆಗಮಿಸಿದ್ದರಾದರೂ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಒಂದು ಗಂಟೆಯ ನಂತರ ಘಟನಾ ಸ್ಥಳಕ್ಕೆ ಬಂದು ಸೇರಿತ್ತು.

"ನನ್ನ ಮಗನಷ್ಟೇ ಚಿಕ್ಕ ಮಕ್ಕಳು ಸೇರಿದಂತೆ ಜನರು, ಕೊಚ್ಚಿ ಹೋಗುವುದನ್ನು ನಾನು ನೋಡಿದೆ. ನನಗೆ ಸುಮ್ಮನೆ ನಿಂತು ನೋಡಲಾಗಲಿಲ್ಲ; ಹಾಗಾಗಿ ನಾನು ಜಿಗಿದು ಜನರನ್ನು ರಕ್ಷಿಸಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ" ಅವರು ಹೇಳಿದ್ದಾರೆ. 

"ನಾನು ನಿಮಗೆ ನಿಖರವಾದ ಎಣಿಕೆಯನ್ನು ನೀಡಲು ಸಾಧ್ಯವಿಲ್ಲ ಆದರೆ, ಹೌದು, ನಾನು ಹಲವಾರು ಜನರಿಗೆ ದಡಗಳನ್ನು ತಲುಪಲು ಸಹಾಯ ಮಾಡಿದ್ದೇನೆ" ಎಂದು ಮೂರು ವರ್ಷ ಪ್ರಾಯದ ಮಗುವಿನ ತಂದೆ ಮಾಣಿಕ್‌ ಅವರು ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.
 
ವೃತ್ತಿಯಲ್ಲಿ ವೆಲ್ಡರ್ ಆಗಿರುವ ಮಾಣಿಕ್, ಮಲ್ಬಜಾರ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ಟೇಸಿಮಲಾ ಗ್ರಾಮದಲ್ಲಿ ತನ್ನ ಪೋಷಕರು, ಹೆಂಡತಿ, ಮಗ ಮತ್ತು ಕಿರಿಯ ಸಹೋದರನೊಂದಿಗೆ ವಾಸಿಸುತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಮಾಣಿಕ್‌ ಕೂಡಾ ಗಾಯಗೊಂಡಿದ್ದಾರೆ. ಅವರ ಬಲ ಹೆಬ್ಬೆರಳಿನಿಂದ ರಕ್ತಸ್ರಾವವಾಗತೊಡಗಿದಾಗ ಅವರಿಗೆ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಕರವಸ್ತ್ರವನ್ನು ನೀಡಿದರು, ಅದನ್ನು ಕಟ್ಟಿ ಮತ್ತೆ ಜನರಿಗೆ ಸಹಾಯ ಮಾಡಲು ಮಾಣಿಕ್‌ ನದಿಗಿಳಿದಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನದಿಯಿಂದ ದಡದವರೆಗೆ ಈಜಾಡಿದ ಬಳಿಕ ಆಯಾಸಗೊಂಡ ಮಾಣಿಕ್‌ ರನ್ನು ನಂತರ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ವರದಿಯಾಗಿದೆ.

 
  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News