ಡಾಲರ್‌ನೆದುರು 82.33ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

Update: 2022-10-07 16:37 GMT

ಹೊಸದಿಲ್ಲಿ,ಅ.7: ಅಮೆರಿಕದ ಬಾಂಡ್ ಇಳುವರಿಗಳಲ್ಲಿ ಏರಿಕೆ, ಅಪಾಯದಿಂದ ದೂರವಿರುವ ಹೂಡಿಕೆದಾರರ ಮನೋಭಾವ ಮತ್ತು ದೃಢವಾದ ಕಚ್ಚಾತೈಲ ಬೆಲೆಗಳಿಂದಾಗಿ ಶುಕ್ರವಾರ ಅಮೆರಿಕದ ಡಾಲರ್‌ನೆದುರು 16 ಪೈಸೆಗಳಷ್ಟು ಕುಸಿದ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 82.33ರಲ್ಲಿ ಮುಕ್ತಾಯಗೊಂಡಿದೆ.

ಗುರುವಾರ 81.89ರಲ್ಲಿ ಮುಕ್ತಾಯಗೊಂಡಿದ್ದ ರೂಪಾಯಿ ಶುಕ್ರವಾರ ಬೆಳಿಗ್ಗೆ 9:30ಕ್ಕೆ ಶೇ.0.5ರಷ್ಟು ನಷ್ಟದೊಂದಿಗೆ 82.30ರಲ್ಲಿ ವಹಿವಾಟಾಗುತ್ತಿತ್ತು. 82.19ರಲ್ಲಿ ಆರಂಭಗೊಂಡಿದ್ದ ರೂಪಾಯಿ ಕೆಲವೇ ಸಮಯದಲ್ಲಿ 82.33ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ಬಳಿಕ ಮತ್ತೆ ಚೇತರಿಸಿಕೊಳ್ಳಲಿಲ್ಲ.

ಗುರುವಾರ ಭಾರತೀಯ ಕರೆನ್ಸಿಯು ಡಾಲರ್‌ನೆದುರು ಮೊದಲ ಬಾರಿ 82ರ ಮಟ್ಟಕ್ಕಿಂತ ಕೆಳಕ್ಕೆ ಮುಕ್ತಾಯಗೊಂಡಿತ್ತು. ದಿನದ ವಹಿವಾಟಿನಲ್ಲಿ 55 ಪೈಸೆಗಳಷ್ಟು ಕುಸಿದು 82.17ರ ದಾಖಲೆ ಮಟ್ಟಕ್ಕೆ ಪತನಗೊಂಡಿತ್ತು.

ಕಚ್ಚಾತೈಲ ಬೆಲೆಗಳಲ್ಲಿ ಏರಿಕೆ ವ್ಯಾಪಾರ ಕೊರತೆಯು ಮತ್ತೊಮ್ಮೆ ಕಾಣಿಸಿಕೊಳ್ಳುವ ಕಳವಳಗಳಿಗೆ ಕಾರಣವಾಗಿದೆ. ಅಮೆರಿಕದ ಬಡ್ಡಿದರಗಳು ದೀರ್ಘಾವಧಿಗೆ ಮೇಲ್ಮಟ್ಟದಲ್ಲಿ ಉಳಿದುಕೊಂಡಿರುವುದು ಬಂಡವಾಳ ಖಾತೆಗೆ ನೆರವಾಗುತ್ತಿಲ್ಲ ಎಂದು ಐಎಫ್‌ಎ ಗ್ಲೋಬಲ್ ರೀಸರ್ಚ್ ಅಕಾಡಮಿ ತನ್ನ ಟಿಪ್ಪಣಿಯಲ್ಲಿ ಹೇಳಿದೆ. ಅಲ್ಲದೆ ಆರ್‌ಬಿಐ ವಿದೇಶಿ ವಿನಿಮಯ ಮೀಸಲನ್ನು ವೆಚ್ಚಮಾಡುವುದರಲ್ಲಿ ಮಿತಿಯ ಧೋರಣೆಯನ್ನು ತಳೆದಿರುವಂತಿದೆ ಮತ್ತು ಈ ಎಲ್ಲ ಅಂಶಗಳು ರೂಪಾಯಿಯ ಹೊಂದಾಣಿಕೆಗೆ ಕಾರಣವಾಗಿವೆ ಎಂದೂ ಅದು ತಿಳಿಸಿದೆ.

ಹೆಚ್ಚುತ್ತಿರುವ ಕಚ್ಚಾತೈಲ ಬೆಲೆಗಳು ಮತ್ತು ಬಡ್ಡಿದರಗಳನ್ನು ಹೆಚ್ಚಿಸುವ ಯು.ಎಸ್.ಫೆಡರಲ್ ರಿಸರ್ವ್‌ನ ಆಕ್ರಮಣಕಾರಿ ಧೋರಣೆಯಿಂದಾಗಿ ಭಾರತೀಯ ರೂಪಾಯಿಯು ಈ ವರ್ಷದಾಚೆಯೂ ಡಾಲರ್‌ನೆದುರು ತನ್ನ ದಾಖಲೆಯ ಕನಿಷ್ಠ ಮಟ್ಟದ ಸಮೀಪ ವಹಿವಾಟಾಗಲಿದೆ ಎಂದು ರಾಯ್ಟರ್ಸ್ ಸಮೀಕ್ಷೆಯು ಬೆಟ್ಟು ಮಾಡಿದೆ.

ಸ್ಥಳೀಯ ಕರೆನ್ಸಿಯನ್ನು ರಕ್ಷಿಸಲು ತನ್ನ ವಿದೇಶಿ ವಿನಿಮಯ ಮೀಸಲಿನ ಮಾರಾಟವನ್ನು ಆರ್‌ಬಿಐ ಮುಂದುವರಿಸಿದ್ದರೂ ಈ ವರ್ಷ ಶೇ.10ಕ್ಕೂ ಕುಸಿದಿರುವ ರೂಪಾಯಿಯು ಶುಕ್ರವಾರ ಡಾಲರ್‌ನೆದುರು 82.33ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ದಾಖಲಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಆರ್‌ಬಿಐ ಕಳೆದ ವಾರ ಸತತ ನಾಲ್ಕನೇ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸಿದ ಬಳಿಕ ರೂಪಾಯಿ ಕುಸಿತಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಬಿದ್ದಿತ್ತಾದರೂ ಏರುತ್ತಿರುವ ಕಚ್ಚಾತೈಲ ಬೆಲೆಗಳಿಂದಾಗಿ ವ್ಯಾಪಾರ ಕೊರತೆ ಮತ್ತು ರಫ್ತುಗಳಲ್ಲಿ ಮಂದಗತಿ ರೂಪಾಯಿ ನೆಲಕಚ್ಚುವಂತೆ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News