ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಜನರಿಗೆ ಬಿಜೆಪಿ ನಾಯಕ ಸಂಗೀತ್ ಸೋಮ್ ಕರೆ

Update: 2022-10-07 17:00 GMT
PHOTO:PTI

ಲಕ್ನೋ, ಅ. 6 : ಉತ್ತರಪ್ರದೇಶದ ಮೀರತ್‌ನ ಖೇಡಾ ಗ್ರಾಮದಲ್ಲಿ ವಿಜಯ ದಶಮಿಯಂದು ‘ರಜಪೂತ್ ಉತ್ತಮ್ ಸಭಾ’ ಆಯೋಜಿಸಿದ್ದ ಆಯುಧ ಪೂಜೆ ಕಾರ್ಯಕ್ರಮದ ಸಂದರ್ಭ  ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಸಂಗೀತ್ ಸೋಮ್ ಆಯುಧಗಳನ್ನು ಕೈಗೆತ್ತಿಕೊಳ್ಳುವಂತೆ ರಜಪೂತರಿಗೆ ಕರೆ ನೀಡಿದ್ದಾರೆ. 

2013 ರ ಮುಝಫರ್‌ನಗರ ಗಲಭೆಗೆ ಸಂಬಂಧಿಸಿದ ಪ್ರಕರಣದ  ಆರೋಪಿಯಾಗಿದ್ದ ಸೋಮ್ ಅಲ್ಪಸಂಖ್ಯಾತ ಸಮುದಾಯವನ್ನು ಪರೋಕ್ಷವಾಗಿ ಉಲ್ಲೇಖಿಸಿ, ‘‘ದೇಶ ವಿರೋಧಿ ಶಕ್ತಿಗಳು’’ ದೇಶದ ಮೇಲೆ ದಾಳಿ ನಡೆಸುತ್ತಿವೆ ಎಂದಿದ್ದಾರೆ.  ನಿರ್ದಿಷ್ಟ ಸಮುದಾಯದ ಜನಸಂಖ್ಯೆ ಹೆಚ್ಚುತ್ತಿರುವ ರೀತಿಯಲ್ಲೇ ಭಯೋತ್ಪಾದನೆ ಹೆಚ್ಚುತ್ತಿದೆ, ಪ್ರತ್ಯೇಕತಾವಾದದ ಚರ್ಚೆಗಳು ನಡೆಯುತ್ತಿವೆ, ತಲೆ ಕತ್ತರಿಸುವ ಮಾತು ಕೇಳಿ ಬರುತ್ತಿದೆ. ಇದೆಲ್ಲವನ್ನೂ ಕೊನೆಗೊಳಿಸಲು ಭವಿಷ್ಯದಲ್ಲಿ ಅಧಿಕಾರದೊಂದಿಗೆ ಆಯುಧಗಳು ಕೂಡ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.  

‘‘ರಜಪೂತ ಸಮುದಾಯ ಮತ್ತೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು’’ ಎಂದು ಸರ್ಧಾನ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿದ್ದಾರೆ. ಕೇರಳದಲ್ಲಿ ‘ಭಾರತ್ ಜೋಡೊ ಯಾತ್ರೆ’ ಸಂದರ್ಭ ರಾಷ್ಟ್ರ ಧ್ವಜ ಕಂಡು ಬಂದಿಲ್ಲ. ಹಸಿರು ಬಾವುಟ ಕಂಡು ಬಂದಿದೆ ಎಂದು ತಪ್ಪಾಗಿ ಪ್ರತಿಪಾದಿಸುವ ಮೂಲಕ ಕಾಂಗ್ರೆಸ್‌ನ ‘ಭಾರತ್ ಜೋಡೊ ಯಾತ್ರೆ’ಯನ್ನು  ಕೋಮವಾದೀಕರಣಗೊಳಿಸಲು ಕೂಡ ಅವರು ಪ್ರಯತ್ನಿಸಿದ್ದಾರೆ. ‘‘ಪಶ್ಚಿಮ ಉತ್ತರಪ್ರದೇಶದಾದ್ಯಂತ ಹಸಿರು ಬಾವುಟಗಳು ಕಂಡು ಬರುವ ದಿನ ದೂರವಿಲ್ಲ’’ ಎಂದು ಅವರು ಹೇಳಿದ್ದಾರೆ. ಸಿನೆಮಾಗಳಲ್ಲಿ ರಜಪೂತರನ್ನು ತಪ್ಪಾಗಿ ಚಿತ್ರಿಸುವುದೂ ಸೇರಿದಂತೆ ರಜಪೂತರಿಗೆ ಕಳಂಕ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ‘‘ಸತ್ಯವೇನೆಂದರೆ ರಾಮ ಹಾಗೂ ಕೃಷ್ಣ ಭೂಮಿಗೆ ಬರಲು ರಜಪೂತರಾಗಿ ಜನಿಸಬೇಕಾಯಿತು’’ ಎಂದು ಸೋಮ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News