ಗುಜರಾತ್: ಯುವಕರಿಗೆ ಪೊಲೀಸರಿಂದ ಸಾರ್ವಜನಿಕ ಥಳಿತ; ಎನ್‌ಎಚ್‌ಆರ್‌ಸಿಗೆ ಟಿಎಂಸಿ ದೂರು

Update: 2022-10-08 09:47 GMT
ಸಾಕೇತ್ ಗೋಖಲೆ (Photo: PTI)

ಹೊಸದಿಲ್ಲಿ: ಗುಜರಾತ್ ಪೊಲೀಸ್ ಸಿಬ್ಬಂದಿ ಮುಸ್ಲಿಂ ವ್ಯಕ್ತಿಗಳಿಗೆ  ಸಾರ್ವಜನಿಕವಾಗಿ ಥಳಿಸಿರುವುದಕ್ಕೆ ಸಂಬಂಧಿಸಿ  ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಟಿಎಂಸಿ ದೂರ ಸಲ್ಲಿಸಿದೆ ಎಂದು ಪಕ್ಷದ ವಕ್ತಾರ ಸಾಕೇತ್ ಗೋಖಲೆ ಶುಕ್ರವಾರ ತಿಳಿಸಿದ್ದಾರೆ. 

ಪ್ರಕರಣವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳದೇ ಇರುವುದು ನಾಚಿಕೆಗೇಡಿನ ವಿಷಯ ಎಂದು ಅವರು ಹೇಳಿದ್ದಾರೆ. ಕಳೆದ ವಾರ ಗುಜರಾತ್‌ನ ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ಗಾರ್ಭಾ ಕಾರ್ಯಕ್ರಮದ ಸಂದರ್ಭ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾದ ಮುಸ್ಲಿಂ ಸಮುದಾಯದ ಸದಸ್ಯರನ್ನು ಒಳಗೊಂಡ ಗುಂಪಿನ ಭಾಗವಾಗಿದ್ದ ಕೆಲವರಿಗೆ ಪೊಲೀಸರು ಸಾರ್ವಜನಿಕವಾಗಿ ಥಳಿಸಿದ್ದರು. 

ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಬಂಧಿಸಲಾದ ಮೂವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಪೊಲೀಸರು ಒಬ್ಬರಾದ ಬಳಿಕ ಮತ್ತೊಬ್ಬರು ಲಾಠಿಯಿಂದ ಥಳಿಸುತ್ತಿರುವ ಘಟನೆಯ ವೀಡಿಯೊ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆಗಿತ್ತು. ‘‘ಗುಜರಾತ್ ಪೊಲೀಸರು ಮುಸ್ಲಿಂ ಯುವಕರಿಗೆ ಸಾರ್ವಜನಿಕವಾಗಿ ಥಳಿಸಿದ ಘಟನೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಳ್ಳದೇ ಇರುವುದು ನಾಚಿಕೆಗೇಡಿನ ವಿಚಾರ. ಘಟನೆ ಕುರಿತಂತೆ ತೃಣಮೂಲ ಕಾಂಗ್ರೆಸ್ ಶುಕ್ರವಾರ ಎನ್‌ಎಚ್‌ಆರ್‌ಸಿಗೆ ದೂರು ಸಲ್ಲಿಸಿದೆ’’ ಎಂದು ಗೋಖಲೆ ಟ್ವೀಟ್‌ನಲ್ಲಿ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News