ದಿಲ್ಲಿ ಅಬಕಾರಿ ನೀತಿ ಹಗರಣ ಪ್ರಕರಣ: 35 ಸ್ಥಳಗಳಲ್ಲಿ ಈ.ಡಿ. ದಾಳಿ

Update: 2022-10-07 16:52 GMT
PHOTO: PTI

ಹೊಸದಿಲ್ಲಿ, ಅ. 7: ದಿಲ್ಲಿ ಸರಕಾರ ಇತ್ತೀಚೆಗೆ ಹಿಂಪಡೆದುಕೊಂಡಿದ್ದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ  ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈ.ಡಿ.) ಗುರುವಾರ ದಿಲ್ಲಿ, ಪಂಜಾಬ್ ಹಾಗೂ ಹೈದರಾಬಾದ್‌ನ ೩೫ ಸ್ಥಳಗಳಲ್ಲಿ ದಾಳಿ ನಡೆಸಿದೆ. 

ಮದ್ಯದ ಕಂಪೆನಿಗಳು, ವಿತರಕರು ಹಾಗೂ ಪೂರೈಕೆ ಜಾಲದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳು ನಂಟು ಹೊಂದಿರುವ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಈ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಎರಡು ಸುತ್ತಿನ ದಾಳಿ ನಡೆಸಿತ್ತು. ಅದು ಇದುವರೆಗೆ 100 ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಸಿಬಿಐ ಆಗಸ್ಟ್‌ನಲ್ಲಿ ದಾಖಲಿಸಿದ ಪ್ರಕರಣ ಈ ಹಣ ಅಕ್ರಮ ವರ್ಗಾವಣೆಯ ಪ್ರಕರಣಕ್ಕೆ ಮೂಲವಾಗಿದೆ. ನೂತನ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಆರೋಪದ ಕುರಿತಂತೆ ಸಿಬಿಐ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಇತರ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಎರಡು ವಾರಗಳ ಬಳಿಕ ಸಿಬಿಐ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಇತರ ಆರೋಪಿ ವ್ಯಕ್ತಿಗಳು ನಂಟು ಹೊಂದಿದ ಸ್ಥಳಗಳ ಮೇಲೆ  ದಾಳಿ ನಡೆಸಿತ್ತು. 

ಹೊಸದಿಲ್ಲಿಯಲ್ಲಿ ನವೆಂಬರ್ 17 ರಂದು ಅನುಷ್ಠಾನಗೊಳಿಸಲಾದ ಈ ನೂತನ ನೀತಿ ಅಡಿಯಲ್ಲಿ ಮುಕ್ತ ಹರಾಜಿನ ಮೂಲಕ ಖಾಸಗಿ ಸಂಸ್ಥೆಗಳಿಗೆ 849 ಮದ್ಯದ ಅಂಗಡಿಗಳ ಪರವಾನಿಗೆಯನ್ನು ನೀಡಲಾಗಿತ್ತು. ಆದರೆ, ಈ ಬಗ್ಗೆ ಸಿಬಿಐಯಿಂದ ತನಿಖೆ ನಡೆಸುವಂತೆ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಶಿಫಾರಸು ಮಾಡಿದ ಬಳಿಕ ದಿಲ್ಲಿ ಸರಕಾರ ಜುಲೈ ೩೦ರಂದು ಈ ನೀತಿಯನ್ನು ಹಿಂಪಡೆದುಕೊಂಡಿತ್ತು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಈ ದಾಳಿಯನ್ನು ಟೀಕಿಸಿದ್ದಾರೆ. ‘‘ಇದು ಹೊಲಸು ರಾಜಕಾರಣ’’ ಎಂದು ಅವರು ಹೇಳಿದ್ದಾರೆ. ಸಿಸೋಡಿಯಾ ಅವರ ವಿರುದ್ಧ ಪುರಾವೆ ಪತ್ತೆ ಮಾಡಲು ೫೦೦ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಆದರೆ, ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News