ಹಾಂಕಾಂಗ್: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 5 ಅಪ್ರಾಪ್ತ ವಯಸ್ಕರಿಗೆ ಶಿಕ್ಷೆ

Update: 2022-10-08 17:13 GMT
photo : NDTV 

ಹಾಂಕಾಂಗ್, ಅ.8: ಸಶಸ್ತ್ರ ಹೋರಾಟದ ಮೂಲಕ ಚೀನಾ ಸರಕಾರದ ಪದಚ್ಯುತಿಗೆ ಪ್ರತಿಪಾದನೆ ನಡೆಸಿದ ಆರೋಪದಲ್ಲಿ ಹಾಂಕಾಂಗ್ನ 5 ಅಪ್ರಾಪ್ತ ವಯಸ್ಕರಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನ ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

`ರಿಟರ್ನಿಂಗ್ ವೇಲಿಯಂಟ್' ಎಂದು ಕರೆಸಿಕೊಳ್ಳುವ, ಅಷ್ಟೊಂದು ಚಿರಪರಿಚಿತವಲ್ಲದ ಪ್ರಜಾಪ್ರಭುತ್ವ ಪರ ಸಂಘಟನೆಯು ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಚೀನಾ ಸರಕಾರದ ವಿರುದ್ಧ ಸಶಸ್ತ್ರ ಕ್ರಾಂತಿಗೆ ಕರೆ ನೀಡಿದೆ ಎಂಬ ಆರೋಪದಲ್ಲಿ 16 ವರ್ಷದ ಹುಡುಗಿ, ಮೂವರು 17 ವರ್ಷದ ಹುಡುಗರ ಸಹಿತ 5 ಮಂದಿಯ ವಿರುದ್ಧ ವಿಧ್ವಂಸಕತೆಯನ್ನು ಪ್ರಚೋದಿಸುವ ಪಿತೂರಿ ನಡೆಸಿದ ಆರೋಪ ಹೊರಿಸಲಾಗಿತ್ತು. ಈ ಸಂಘಟನೆಯ ಸದಸ್ಯರು ರೈಲ್ವೇ ನಿಲ್ದಾಣದ ಹೊರಗಡೆ ಸಂದೇಶ ಸಾರುವ ಪೋಸ್ಟರ್ಗಳನ್ನು ಅಂಟಿಸಿದ್ದಾರೆ, ಸುದ್ಧಿಗೋಷ್ಟಿಯ ಮೂಲಕ ಅಥವಾ ಆನ್ಲೈನ್ ವೇದಿಕೆಯ ಮೂಲಕ ಸಶಸ್ತ್ರ ಕ್ರಾಂತಿಗೆ ಕರೆ ನೀಡಿದ್ದಾರೆ.

ಫ್ರಾನ್ಸ್ನ ಕ್ರಾಂತಿ ಹಾಗೂ ಪ್ರಜಾಪ್ರಭುತ್ವೀಕರಣಕ್ಕಾಗಿ ಉಕ್ರೇನ್ನ ಹೋರಾಟವನ್ನು ತಮ್ಮ ಸಂದೇಶಕ್ಕೆ ಪೂರಕವಾಗಿ ಉದಾಹರಣೆ ನೀಡುವ ಮೂಲಕ ಜನರನ್ನು ಪ್ರಚೋದಿಸುವ ಪಿತೂರಿ ಹೂಡಿದ್ದಾರೆ ಎಂದು ಪ್ರಾಸಿಕ್ಯೂಟರ್ ವಾದಿಸಿದ್ದರು.   ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕ್ವಾಕ್ ವಾಯ್ಕಿನ್, ಐವರು ಆರೋಪಿಗಳ ಅಪರಾಧ ಸಾಬೀತಾಗಿರುವುದರಿಂದ ಪುನರ್ವಸತಿ ಕೇಂದ್ರಿತ ಬಂಧನ ವ್ಯವಸ್ಥೆಯಾದ ತರಬೇತಿ ಕೇಂದ್ರದಲ್ಲಿ 3 ವರ್ಷದವರೆಗೆ ಇರಿಸಬೇಕು ಎಂದು ತೀರ್ಪು ನೀಡಿದರು.

ವಿಚಾರಣೆ ಅವಧಿಯಲ್ಲಿ ಈ ಐದೂ ಮಂದಿ ಈಗಾಗಲೇ 1 ವರ್ಷ ಬಂಧನದಲ್ಲಿದ್ದರು. ಹಾಂಕಾಂಗ್ನ ಕುಖ್ಯಾತ ರಾಷ್ಟ್ರೀಯ  ಭದ್ರತಾ ಕಾಯ್ದೆಯ ಪ್ರಕಾರ, ವಿಧ್ವಂಸಕತೆಯನ್ನು ಪ್ರಚೋದಿಸುವ ಯಾವುದೇ ವ್ಯಕ್ತಿಗೆ, ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದರೆ  5ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆಯನ್ನು ವಿಧಿಸಲಾಗುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News