ಐರ್ಲೆಂಡ್: ಪೆಟ್ರೋಲ್ ಸ್ಟೇಷನ್ ನಲ್ಲಿ ಸ್ಫೋಟ 7 ಮಂದಿ ಮೃತ್ಯು; 8 ಮಂದಿಗೆ ಗಾಯ

Update: 2022-10-08 17:17 GMT

ಡಬ್ಲಿನ್, ಅ.8: ವಾಯವ್ಯ ಐರ್ಲೆಂಡ್ ನ ಕ್ರಿಸ್ಲೊ ಎಂಬ ನಗರದಲ್ಲಿನ ಪೆಟ್ರೋಲ್ ಸ್ಟೇಷನ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 7 ಮಂದಿ ಸಾವನ್ನಪ್ಪಿದ್ದು ಗಾಯಗೊಂಡಿರುವ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ  ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.

ಪ್ರಬಲ ಸ್ಫೋಟದಿಂದ ಪೆಟ್ರೋಲ್ ಸ್ಟೇಷನ್ ನ ಹಿಂಬದಿಯಲ್ಲಿದ್ದ 2 ಮಹಡಿಯ ವಸತಿ ಕಟ್ಟಡ ನೆಲಸಮಗೊಂಡಿದ್ದರೆ, ಪಕ್ಕದಲ್ಲಿದ್ದ ಮತ್ತೊಂದು 2 ಮಹಡಿಯ ಕಟ್ಟಡದ ಮುಂಭಾಗ ಹಾರಿಹೋಗಿದೆ. ಸ್ಫೋಟದ ಸದ್ದು ಬಾಂಬ್ ಸ್ಫೋಟಿಸಿದಂತಿತ್ತು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಕುಸಿದು ಬಿದ್ದ ಕಟ್ಟಡದ ಅವಶೇಷ, ನೆಲಸಮಗೊಂಡಿರುವ ಪೆಟ್ರೋಲ್ ಸ್ಟೇಷನ್ನ ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇರುವುದರಿಂದ ಸಾವು ನೋವು ಹೆಚ್ಚುವ ಸಾಧ್ಯತೆಯಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಐರ್ಲೆಂಡ್ ಪೊಲೀಸ್ ಹಾಗೂ  ನಾಗರಿಕ ರಕ್ಷಣಾ ಪಡೆ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ತೀವ್ರ ಗಾಯಗೊಂಡವರನ್ನು ದುರಂತದ ಸ್ಥಳದಿಂದ ಹೆಲಿಕಾಪ್ಟರ್ ಮೂಲಕ ಏರ್ಲಿಫ್ಟ್ ಮಾಡಲಾಗಿದೆ. ಸಮೀಪದ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೈಕೆಗೆ ಸರ್ವಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. ದುರಂತದ ಬಗ್ಗೆ ಐರ್ಲೆಂಡ್ ಅಧ್ಯಕ್ಷ ಮಿಚೆಲ್ ಡಿ ಹಿಗ್ಗಿನ್ಸ್,  ಪ್ರೀಮಿಯರ್ ಮಿಚೆಲ್ ಮಾರ್ಟಿನ್  ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News