ಲಂಚ ಆರೋಪ: ಸಿಬಿಐನಿಂದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿಚಾರಣೆ

Update: 2022-10-09 02:23 GMT
ಸತ್ಯಪಾಲ್ ಮಲಿಕ್ (ಫೋಟೊ PTI)

ಹೊಸದಿಲ್ಲಿ: ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಅವಧಿಯಲ್ಲಿ 2018-19ರ ನಡುವೆ ಎರಡು ಯೋಜನೆಗಳನ್ನು ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೇಘಾಲಯದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಶನಿವಾರ ಸಿಬಿಐ ವಿಚಾರಣೆಗೆ ಗುರಿಪಡಿಸಿದೆ ಎಂದು hindustantimes.com ವರದಿ ಮಾಡಿದೆ.

ಅ. 4ರಂದು ಮಲಿಕ್ ಅವರ ಐದು ವರ್ಷಗಳ ಅಧಿಕಾರಾವಧಿ ಮುಕ್ತಾಯವಾಗಿದ್ದು, ತಕ್ಷಣವೇ ಸಿಬಿಐ ವಿಚಾರಣೆ ಆರಂಭಿಸಿದೆ.

"ಸಿಬಿಐ ನನ್ನನ್ನು ಕರೆಸಿಕೊಂಡು ಪ್ರಕರಣದ ಸಂಬಂಧ ನನ್ನ ಆಭಿಪ್ರಾಯ ಪಡೆದಿದೆ. ಇನ್ನಷ್ಟು ವಿಚಾರಣೆ ಸಂಬಂಧ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ" ಎಂದು ಸತ್ಯಪಾಲ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.

ಎರಡು ದಿನಗಳ ಹಿಂದೆ ಸಿಬಿಐ ಅಧಿಕಾರಿಗಳು ಸತ್ಯಪಾಲ್ ಮಲಿಕ್ ಅವರ ವಿಚಾರಣೆ ಆರಂಭಿಸಿದ್ದು, ಶನಿವಾರ ತೀವ್ರ ವಿಚಾರಣೆ ನಡೆಸಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಅವಧಿಯಲಿ ಎರಡು ಕಡತಗಳನ್ನು ವಿಲೇವಾರಿ ಮಾಡಲು 300 ಕೋಟಿ ರೂ. ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಸತ್ಯಪಾಲ್ ಮಲಿಕ್ ಕಳೆದ ಏಪ್ರಿಲ್‍ನಲ್ಲಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆ ಎರಡು ಎಫ್‍ಐಆರ್ ದಾಖಲಿಸಿತ್ತು. ಸರ್ಕಾರಿ ಉದ್ಯೋಗಿಗಳಿಗೆ ವೈದ್ಯಕೀಯ ವಿಮೆ ಯೋಜನೆಯ ಗುತ್ತಿಗೆ ನೀಡಲು ಉದ್ಯಮ ಸಮೂಹವೊಂದು ಈ ಲಂಚ ನೀಡಲು ಮುಂದೆ ಬಂದಿತ್ತು ಎಂದು ಸತ್ಯಪಾಲ್ ಮಲಿಕ್ ಹೇಳಿದ್ದರು.

ಈ ಪೈಕಿ ಒಂದು ಕಡತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರೊಬ್ಬರಿಗೆ ಸೇರಿದ್ದಾಗಿತ್ತು ಎಂದು ಸತ್ಯಪಾಲ್ ಮಲಿಕ್ ಬಹಿರಂಗಪಡಿಸಿದ್ದರು.

"ಎರಡು ಕಡತಗಳು ನನ್ನ ಪರಿಶೀಲನೆಗೆ ಬಂದವು. ಇವುಗಳನ್ನು ಮಂಜೂರು ಮಾಡಿದರೆ ತಲಾ 150 ಕೋಟಿ ಹಣವನ್ನು ಪಡೆಯಬಹುದು ಎಂದು ಕಾರ್ಯದರ್ಶಿಗಳಲ್ಲೊಬ್ಬರು ಹೇಳಿದ್ದರು. ಆದರೆ ನಾನು ಐದು ಕುರ್ತಾ- ಪೈಜಾಮಿನೊಂದಿಗೆ ಕಾಶ್ಮೀರಕ್ಕೆ ಬಂದಿದ್ದು, ಹಾಗೆಯೇ ತೆರಳುತ್ತೇನೆ ಎಂದು ಹೇಳಿ ಅದನ್ನು ನಿರಾಕರಿಸಿದ್ದೆ" ಎಂದು 2011ರ ಅಕ್ಟೋಬರ್ 17ರಂದು ರಾಜಸ್ಥಾನದಲ್ಲಿ ಸಮಾರಂಭವೊಂದರಲ್ಲಿ ಸತ್ಯಪಾಲ್ ಮಲಿಕ್ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News