×
Ad

'ನರಭಕ್ಷಕ' ಹುಲಿ ಬಿಹಾರ ಎಸ್‍ಟಿಎಫ್ ಗುಂಡಿಗೆ ಬಲಿ

Update: 2022-10-09 07:57 IST

ಪಾಟ್ನಾ: ಚಂಪಾರಣ್ ಪ್ರದೇಶದಲ್ಲಿ 'ನರಭಕ್ಷಕ' ಎಂದೇ ಕುಖ್ಯಾತವಾಗಿ 10 ಮಂದಿಯನ್ನು ಕೊಂದು, ನೂರಾರು ಜಾನುವಾರುಗಳನ್ನು ಬೇಟೆ ಮಾಡಿದ್ದ ಹುಲಿ ಕೊನೆಗೂ ಬಿಹಾರ ಎಸ್‍ಟಿಎಫ್ ಗುಂಡಿಗೆ ಬಲಿಯಾಗಿದೆ.

ವಾಲ್ಮೀಕಿ ಹುಲಿ ಅಭಯಾರಣ್ಯದಲ್ಲಿ 28 ದಿನಗಳ ಮ್ಯಾರಥಾನ್ ಬೇಟೆಯ ಬಳಿಕ ಹುಲಿಯನ್ನು ಗುಂಡಿಟ್ಟು ಸಾಯಿಸಲಾಗಿದೆ.

ಟಿ-104 ಹುಲಿ, ಒಬ್ಬರು ಮಹಿಳೆ ಮತ್ತು ಆಕೆಯ ಮಗನನ್ನು ಬೇಟೆ ಮಾಡಿದ ಕೆಲವೇ ಗಂಟೆಗಳಲ್ಲಿ ಅದನ್ನು ಗುಂಡಿಟ್ಟು ಸಾಯಿಸಲಾಗಿದ್ದು, ಹಲವು ದಿನಗಳಿಂದ ಭಯಭೀತರಾಗಿದ್ದ ಗ್ರಾಮಸ್ಥರಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ಕುಟುಂಬ ಸದಸ್ಯರನ್ನು ಕಳೆದುಕೊಂಡ ಹಲವು ಮಂದಿ ರಾತ್ರಿಯಾದರೆ ಹೊರಹೋಗಲೂ ಭಯಪಡುವ ವಾತಾವರಣ ಇತ್ತು.

"ಮನುಷ್ಯ ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾದ ಟಿ-104 ಹುಲಿಯನ್ನು ಬಿಹಾರ ಪೊಲೀಸ್ ಜವಾನರು 3.15ಕ್ಕೆ ಗುಂಡಿಟ್ಟು ಸಾಯಿಸುವ ಮೂಲಕ ವಿಶೇಷ ತೀವ್ರ ಕಾರ್ಯಾಚರಣೆ ಮುಕ್ತಾಯವಾಗಿದೆ" ಎಂದು ಮುಖ್ಯ ವನ್ಯಜೀವಿ ವಾರ್ಡನ್ (ಬಿಹಾರ) ಪ್ರಭಾತ್ ಕುಮಾರ್ ಗುಪ್ತಾ ಹೇಳಿದ್ದಾರೆ.

ಮೂರು ವರ್ಷದ ಗಂಡುಹುಲಿ 'ಚಂಪರಣ್‍ನ ನರಭಕ್ಷಕ' ಎಂದೇ ಕುಖ್ಯಾತವಾಗಿತ್ತು. ಕಬ್ಬಿನ ಗದ್ದೆಯಲ್ಲಿ ಹುಟ್ಟಿ ಮನುಷ್ಯರ ಸನಿಹದಲ್ಲೇ ಬೆಳೆದ ಈ ಹುಲಿ ಕನಿಷ್ಠ ಹತ್ತು ಮಂದಿಯನ್ನು ಕೊಂದಿತ್ತು. ಕೊನೆಗೆ ಕಬ್ಬಿನ ಗದ್ದೆಯಲ್ಲೇ ಗುಂಡಿಗೆ ಬಲಿಯಾಯಿತು. 400 ಮಂದಿಯನ್ನು ಒಳಗೊಂಡ ತಂಡ ಏಳು ಗಂಟೆಗಳ ಸುಧೀರ್ಘ ಬೇಟೆ ನಡೆಸಿ ಮೂರು ಗುಂಡುಗಳಿಂದ ಸಾಯಿಸಿದರು. ಶನಿವಾರ ಮುಂಜಾನೆ ಈ ಹುಲಿ ಪಾರ್ವತಿದೇವಿ (35) ಮತ್ತು ಆಕೆಯ ಪುತ್ರ ಶಿವಂ ಯಾದವ್ ಎಂಬವರನ್ನು ಬಲೂವಾ ಜಿಲ್ಲೆಯಲ್ಲಿ ಕೊಂದು ಹಾಕಿತ್ತು. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News