36 ವರ್ಷ ಸಂಕೋಲೆಯಿಂದ ಕಟ್ಟಿಹಾಕಿದ್ದ ಮಹಿಳೆಗೆ ಕೊನೆಗೂ ಬಂಧಮುಕ್ತಿ

Update: 2022-10-09 04:20 GMT

ಆಗ್ರಾ: ಐವತ್ತಮೂರು ವರ್ಷದ ಸಪ್ನಾ ಜೈನ್ ಎಂಬ ಮಹಿಳೆ ಸತತ ಮೂವತ್ತಾರು ವರ್ಷಗಳ ಕಾಲ ಕತ್ತಲೆ ಕೋಣೆಯಲ್ಲಿ ತಾಜಾ ಗಾಳಿ ಅಥವಾ ಸ್ವಾತಂತ್ರ್ಯವಿಲ್ಲದೇ ಕಳೆದಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

"ಮಾನಸಿಕ ಅಸ್ವಸ್ಥೆ" ಎಂಬ ಕಾರಣಕ್ಕೆ ಈ ಮಹಿಳೆಯ ತಂದೆಯೇ ಆಕೆಯನ್ನು ಕತ್ತಲ ಕೋಣೆಗೆ ತಳ್ಳಿ ಸಂಕೋಲೆಗಳಿಂದ ಕಟ್ಟಿಹಾಕಿದ್ದು ಬಹಿರಂಗವಾಗಿದೆ.

ಫಿರೋಝಾಬಾದ್ ತಾಲೂಕಿನ ನಿವಾಸಿಯಾಗಿರುವ ಸಪ್ನಾಗೆ ಒಂದು ಬಾಗಿಲಿನ ಮೂಲಕ ಆಹಾರ ಎಸೆಯಲಾಗುತ್ತಿತ್ತು ಹಾಗೂ ಸ್ನಾನಕ್ಕಾಗಿ ನೀರನ್ನು ಕಿಟಕಿಯಿಂದ ಬಕೆಟ್‍ನಲ್ಲಿ ಸುರಿಯಲಾಗುತ್ತಿತ್ತು. ಆಗ್ರಾದ ಮಾಜಿ ಮೇಯರ್ ಹಾಗೂ ಹತ್ರಾಸ್ ಶಾಸಕ ಅಂಜುಲಾ ಮಹೂರ್ ಅವರ ನೆರವಿನಿಂದ ಈ ವಾರ ಕೊನೆಗೂ ಆಕೆ ಬಂಧನದಿಂದ ಮುಕ್ತಿ ಪಡೆದಿದ್ದಾರೆ.

ಸೇವಾಭಾರತಿ ಎಂಬ ಸ್ವಯಂಸೇವಾ ಸಂಸ್ಥೆಯೊಂದು ಈ ಪ್ರಕರಣದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿತ್ತು.

ಸಪ್ನಾ ಅವರ ತಂದೆ ಗಿರೀಶ್ ಚಂದ್ ಇತ್ತೀಚೆಗೆ ನಿಧನರಾದ ಬಳಿಕ ಮಹಿಳಾ ಸಂಘಟನೆಗಳ ಕೆಲ ಸದಸ್ಯರು ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದರು. ಮಹಿಳೆ ತೀರಾ ದಯನೀಯ ಸ್ಥಿತಿಯಲ್ಲಿರುವುದು ಕಂಡುಬಂತು. ಚಿಂದಿ ಬಟ್ಟೆ ಉಟ್ಟುಕೊಂಡು ಎಲ್ಲೆಡೆ ಕೊಳಕು ಇರುವುದು ಕಂಡುಬಂತು. ಎನ್‍ಜಿಓ ಸದಸ್ಯರು ಆಕೆಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ಕೊಡಿಸಿದರು ಎಂದು ಸೇವಾಭಾರತಿಯ ನಿರ್ಮಲಾ ಸಿಂಗ್ ವಿವರ ನೀಡಿದರು.

ಶಾಸಕ ಅಂಜುಲಾ ಮಹೂರ್ ಅವರು ಸಪ್ನಾ ಕುಟುಂಬದವರ ಜತೆ ಚರ್ಚೆ ನಡೆಸಿ ಆಕೆಯನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದರು. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News