ʼಅವರ ಕೈಗಳನ್ನು ಕತ್ತರಿಸಿ, ತಲೆ ಕಡಿಯಿರಿʼ: ವಿಶ್ವ ಹಿಂದೂ ಪರಿಷತ್‌ ನ ರ‍್ಯಾಲಿಯಲ್ಲಿ ದ್ವೇಷಭಾಷಣ

Update: 2022-10-09 13:31 GMT

ಹೊಸದಿಲ್ಲಿ: ವಿಶ್ವ ಹಿಂದೂ ಪರಿಷತ್‌ ದಿಲ್ಲಿಯಲ್ಲಿ ಆಯೋಜಿಸಿದ್ದ ರ‍್ಯಾಲಿಯು ದ್ವೇಷಭಾಷಣದ ಅಖಾಡವಾಗಿ ಮಾರ್ಪಾಡುಗೊಂಡಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಭಾಷಣಕಾರ ಯೋಗೇಶ್ವರ್‌ ಆಚಾರ್ಯ ಎಂಬಾತ, "ನಮ್ಮ ಮೇಲೆ ದಾಳಿ ಮಾಡಿದವರ ಕೈಗಳನ್ನು ಕತ್ತರಿಸಬೇಕು ಮತ್ತು ಶಿರಚ್ಛೇದ ಮಾಡಬೇಕು" ಎಂದು ಕರೆ ನೀಡಿದ್ದಾಗಿ Indiatoday.in ವರದಿ ಮಾಡಿದೆ.

"ಬೇಕಾದರೆ ಅವರ ಕೈಗಳನ್ನು ಕತ್ತರಿಸಿ, ಶಿರಚ್ಛೇದ ಮಾಡಿ. ಹೆಚ್ಚೆಂದರೆ ಜೈಲಿಗೆ ಹೋಗುತ್ತೀರಿ. ಆದರೆ ಇಂತಹಾ ಜನರಿಗೆ ಪಾಠ ಕಲಿಸುವ ಸಮಯ ಬಂದಿದೆ. ಇನ್ ಲೋಗೋಂ ಕೋ ಚುನ್ ಚುನ್ ಕೆ ಮಾರೋ (ಈ ಜನರನ್ನು ಗುರುತಿಸಿ ಹೊಡೆಯಿರಿ) ಎಂದು ಆಚಾರ್ಯ ಹೇಳಿದರು. ಇನ್ನೋರ್ವ ಭಾಷಣಕಾರ, ಮಹಂತ್ ನವಲ್ ಕಿಶೋರ್ ದಾಸ್, "ಜನರು ಲೈಸನ್ಸ್ ಹೊಂದಿರುವ ಅಥವಾ ಲೈಸನ್ಸ್‌ ಇಲ್ಲದೆಯೇ ಬಂದೂಕುಗಳನ್ನು ಪಡೆಯಬೇಕಾಗಿ ಕರೆ ನೀಡಿದ್ದಾನೆ.

"ಬಂದೂಕುಗಳನ್ನು ಪಡೆಯಿರಿ. ಪರವಾನಿಗೆಗಳನ್ನು ಪಡೆಯಿರಿ. ನೀವು ಪರವಾನಿಗೆಗಳನ್ನು ಪಡೆಯದಿದ್ದರೆ, ಚಿಂತಿಸಬೇಡಿ. ನಿನ್ನನ್ನು ಕೊಲ್ಲಲು ಬಂದವರಿಗೆ ಲೈಸೆನ್ಸ್ ಇದೆಯಾ? ಹಾಗಾದರೆ ನಿಮಗೆ ಪರವಾನಿಗೆ ಏಕೆ ಬೇಕು? ಎಂದು ನೆರೆದಿದ್ದ ಜನರನ್ನು ಉದ್ರೇಕಿಸಿದರು.

"ನಾವೆಲ್ಲರೂ ಒಗ್ಗೂಡಿದರೆ, ದಿಲ್ಲಿ ಪೊಲೀಸ್ ಕಮಿಷನರ್ ಕೂಡ ನಮಗೆ ಚಹಾ ನೀಡುತ್ತಾರೆ ಮತ್ತು ನಮಗೆ ಬೇಕಾದುದನ್ನು ಮಾಡಲಿ ಎಂದು ಅವರು ಬಿಟ್ಟುಬಿಡುತ್ತಾರೆ" ಎಂದೂ ಈತ ತನ್ನ ಭಾಷಣದಲ್ಲಿ ಉಲ್ಲೇಖಿಸಿದ್ದಾಗಿ ವರದಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರನ್ನು ಸಮರ್ಥಿಸಿಕೊಂಡ ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್, "ಇದು ಜನ ಆಕ್ರೋಶ್ ರ್ಯಾಲಿಯಾಗಿದ್ದು, ಸಂದೇಶವು ಜಿಹಾದಿ ಕಡೆಗೆ ಮಾತ್ರವಾಗಿದ್ದು, ಯಾವುದೇ ಸಮುದಾಯದ ಕಡೆಗೆ ಅಲ್ಲ. ಜನರು ಈಗಾಗಲೇ ಕೋಪಗೊಂಡಿದ್ದಾರೆ. ಅಗತ್ಯವಿದ್ದರೆ ಜನರು ಕೂಡಾ ಜಿಹಾದಿಗಳ ವಿರುದ್ಧ ಆತ್ಮರಕ್ಷಣೆಗೆ ಬರಬಹುದು" ಎಂದು ಹೇಳಿದರು.

ದಿಲ್ಲಿಯಲ್ಲಿ 25 ವರ್ಷದ ಯುವಕನ ಹತ್ಯೆಯ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ. ಮುಸ್ಲಿಂ ಸಮುದಾಯದವರು ಈ ಕೃತ್ಯವೆಸಗಿದ್ದಾರೆಂದು ಆರೋಪಿಸಲಾಗಿದೆ. ಆದರೆ, ಈ ಹತ್ಯೆಯಲ್ಲಿ ಯಾವುದೇ ಕೋಮುವಾದಿ ಅಂಶ ಇಲ್ಲ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News