ಹೆನ್ನಾಬೈಲ್: ಸೌಹಾರ್ದ ಮೀಲಾದುನ್ನಬಿ ಕಾರ್ಯಕ್ರಮ, ಸನ್ಮಾನ
ಕುಂದಾಪುರ, ಅ.11: ಪ್ರವಾದಿ ಮುಹಮ್ಮದ್(ಸ.) ಅವರದ್ದು ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿತ್ವವಾಗಿದ್ದು, ಎಲ್ಲರಿಗೂ ಮಾದರಿ ಎಂದು ಕುಂದಾಪುರದ ಸಮುದಾಯ ಸಂಘಟನೆಯ ಅಧ್ಯಕ್ಷ ಹಾಗೂ ಸಿದ್ಧಾಪುರ ಪ್ರೌಢಶಾಲೆಯ ಶಿಕ್ಷಕ ಉದಯ ಗಾಂವ್ಕರ ಹೇಳಿದ್ದಾರೆ.
ಹೆನ್ನಾಬೈಲ್ ಮೀಲಾದ್ ಸಮಿತಿ ಆಯೋಜಿಸಿದ್ದ ಪ್ರವಾದಿ ಮುಹಮ್ಮದ್(ಸ.) ಪೈಗಂಬರ್ ಜನ್ಮದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಭವಿಷ್ಯ ಇರುವುದೇ ಸಮುದಾಯಗಳ ಸೌಹಾರ್ದದಲ್ಲೇ ಹೊರತು ದ್ವೇಷದಲ್ಲಲ್ಲ. ದ್ವೇಷವು ಉದ್ರೇಕ ಮನಸ್ಥಿತಿಯ ಕೆಟ್ಟ ಅಭಿವ್ಯಕ್ತಿ. ಪ್ರೀತಿಯು ಪ್ರಬುದ್ಧ ಮನಸ್ಥಿತಿಯ ಸಂಕೇತ. ಹೆನ್ನಾಬೈಲಿನ ಸೌಹಾರ್ದಪ್ರಿಯರು ಸಹಧರ್ಮದವರನ್ನು ಪ್ರವಾದಿ ಜನ್ಮ ದಿನಾಚರಣೆಗೆ ಕರೆದು ಎಂದಿನಂತೆ ಸ್ನೇಹಹಸ್ತ ಚಾಚಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭ ಸುದೀರ್ಘ ಕಾಲದ ಅಂಚೆ ಸೇವೆಗಾಗಿ ಅಂಚೆ ಪೇದೆ ಮಂಜುನಾಥ ಭಂಡಾರಿಯವರನ್ನು, ಸಮುದಾಯ ಸೇವೆಗಾಗಿ ರಶೀದ್ ಆಹ್ಮದ್ ಮತ್ತು ಶೈಕ್ಷಣಿಕ ಸೇವೆಗಾಗಿ ಷಾ ಆಲಂ ರಿಝ್ವಿಯರನ್ನು ಸನ್ಮಾನಿಸಲಾಯಿತು.
ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಸನ್ ಸಾಹೇಬ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಕುಲಾಲ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಶೇಖರ್ ಶೆಟ್ಟಿ ಮತ್ತು ಮೀಲಾದ್ ಸಮಿತಿಯ ಅಧ್ಯಕ್ಷ ಸೈಯದ್ ರಫೀಕ್ ಉಪಸ್ಥಿತರಿದ್ದರು.
ತೌಸೀಫ್ ಇಬ್ರಾಹೀಂ ಸ್ವಾಗತಿಸಿದರು. ಮುಷ್ತಾಕ್ ಹೆನ್ನಾಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.