×
Ad

ಹೆಣ್ಣು ಮಕ್ಕಳು ಕಾನೂನು ಅರಿವು ಹೊಂದಿರಬೇಕು: ನ್ಯಾ. ಶಾಂತವೀರ ಶಿವಪ್ಪ

Update: 2022-10-11 20:38 IST

ಉಡುಪಿ, ಅ.11: ಸರಕಾರ ಹೆಣ್ಣು ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳನ್ನು ರೂಪಿಸಿ ಜಾರಿಗೆ ತಂದಿವೆ. ಇವುಗಳ ಬಗ್ಗೆ ಹೆಣ್ಣು ಮಕ್ಕಳು ಅರಿವು ಹೊಂದಿರುವುದರ ಜೊತೆಗೆ ಅವುಗಳ ಉಪಯುಕ್ತತೆಯನ್ನು ಅರ್ಥ  ಮಾಡಿ ಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಾಂತವೀರ ಶಿವಪ್ಪ ಹೇಳಿದ್ದಾರೆ.

ಕಲ್ಯಾಣಪುರ ಸಂತೆಕಟ್ಟೆಯ ಧನ್ವಂತರಿ ಕಾಲೇಜ್ ಆಫ್ ನಸಿರ್ಂಗ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಇಲಾಖೆ, ರೋಟರಿ, ಚೈಲ್ಡ್‌ಲೈನ್-1098 ಉಡುಪಿ ಮತ್ತು ಧನ್ವಂತರಿ ಕಾಲೇಜ್ ಆಫ್ ನರ್ಸಿಂಗ್ ಸಂತೆಕಟ್ಟೆ ಕಲ್ಯಾಣಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 

ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವಯುತವಾದ ಸ್ಥಾನವಿದೆ. ಇವುಗಳ ಜೊತೆಗೆ ಅವರ ರಕ್ಷಣೆಗೆ ಹುಟ್ಟಿನಿಂದ ಕೊನೆಯವರೆಗೆ ರಕ್ಷಿಸಲು ಅನೇಕ ಕಾನೂನುಗಳನ್ನು ಹೆಣ್ಣು ಮಕ್ಕಳಿಗಾಗಿಯೇ ತರಲಾಗಿದೆ. ಪ್ರಸವ ಪೂರ್ವದಲ್ಲಿ ಭ್ರೂಣ ಹತ್ಯೆ ತಡೆಯಲು ಭ್ರೂಣ ಹತ್ಯೆ ನಿಷೇಧ ಕಾನೂನನ್ನು ಸಹ ಸರಕಾರ ಜಾರಿಗೆ ತಂದಿರುವು ದನ್ನು ಅರಿತಿರಬೇಕು ಎಂದವರು ಹೇಳಿದರು.

ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸ್ವಂತ ಉದ್ಯೋಗ ಹೊಂದುವುದರೊಂದಿಗೆ ಆರ್ಥಿಕವಾಗಿ ಸಬಲರಾಗುವ ಮೂಲಕ ಸ್ವಾವಲಂಬಿಗಳಾಗಬೇಕು. ವೀರರಾಣಿ ಕಿತ್ತೂರು ಚೆನ್ಮಮ್ಮ, ರಾಣಿ ಅಬ್ಬಕ್ಕ ಸೇರಿದಂತೆ ವೀರ ವನಿತೆಯರ ಧೈರ್ಯ, ಸಾಹಸ ಪ್ರವೃತ್ತಿಯನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ರೂಢಿಸಿಕೊಳ್ಳಬೇಕು ಎಂದರು.

ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ವಿದ್ಯಾವಂತರಾಗುವುದರ ಜೊತೆಗೆ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಪುರುಷರಿ ಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ದುರ್ಬಲರೆನಿಸಿದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಶೇ.90ರಷ್ಟು ಈಗಾಗಲೇ ಕಡಿಮೆಯಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹೆಣ್ಣು ಮಕ್ಕಳ ಮೇಲೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಈ ಬಗ್ಗೆ ಹೆಣ್ಣುಮಕ್ಕಳು ಹಾಗೂ ಪೋಷಕರು ಜಾಗೃತರಾಗಿರಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬಳಕೆಯೊಂದಿಗೆ ನೆಟ್‌ಬ್ಯಾಂಕಿಂಗ್‌ನಲ್ಲಿ ಹಣವನ್ನು ಲಪಟಾಯಿಸುವುದು ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಹ್ಯಾಕ್ ಮಾಡುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಮಾತನಾಡಿ, ಸಮಾಜ ದಲ್ಲಿ ಹೆಣ್ಣುಮಕ್ಕಳ ಬಗ್ಗೆ ಇರುವ ಮೂಢನಂಬಿಕೆಗಳಿಂದ ದೂರ ವಿರಬೇಕು. ಇತ್ತೀಚಿನ ದಿನಗಳಲ್ಲಿ ಗಂಡು ಹೆಣ್ಣಿನ ಅನುಪಾತ ಹೆಚ್ಚುತ್ತಿದೆ. ಇದಕ್ಕೆ ಆಸ್ಪದ ನೀಡಬಾರದು ಎಂದರು.

ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರ ಹೆಣ್ಣುಮಕ್ಕಳ ಕಲ್ಯಾಣಾಭಿವೃದ್ಧಿಗೆ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಇದು ಸಮಾಜದ ಕಟ್ಟಕಡೆಯ ಹೆಣ್ಣು ಮಕ್ಕಳಿಗೂ ದೊರೆಯುವಂತಾಗಬೇಕು. ಹೆಣ್ಣುಮಕ್ಕಳಾದ ನಾವು ನಮ್ಮ ಕಾರ್ಯಕ್ಷಮತೆಯನ್ನು ದಕ್ಷ ಹಾಗೂ ಯಾರಿಗಿಂತ ಕಡಿಮೆಯಿಲ್ಲ ಎಂಬ ರೀತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾಡಿತೋರಿಸಬೇಕು ಎಂದರು.

12ನೇ ಶತಮಾನದ ವಚನ ಸಾಹಿತಿಗಳಾದ ಅಕ್ಕಮಹಾದೇವಿ ಸಾಮಾಜಿಕ ಕಟ್ಟುಪಾಡುಗಳನ್ನು ತ್ಯಜಿಸಿ, ಸಮಾಜ ಸುಧಾರಣೆಗಾಗಿ ಕೆಲಸ ಮಾಡಿರುವುದನ್ನು ನಾವು ಚರಿತ್ರೆಯಲ್ಲಿ ಓದಿದ್ದೇವೆ. ಪ್ರಾಚೀನ ಕಾಲದಿಂದಲೂ ಸಹ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯತ್ತಲೇ ಬಂದಿವೆ. ಇವುಗಳನ್ನು ಕೊನೆಗಾಣಿಸಲು ಹೆಣ್ಣು ಮಕ್ಕಳಾದ ನಾವುಗಳೇ ಸಂಕಲ್ಪ ಮಾಡಬೇಕು ಎಂದರು.

ಚೈಲ್ಡ್‌ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ರಸೂತಿತಜ್ಞರಾದ ಡಾ.ಪ್ರತಾಪ್‌ಕುಮಾರ್ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಬಗ್ಗೆ ಹಾಗೂ ಮಾಧವ ಕೃಪಾ ಶಾಲೆಯ ವಿದ್ಯಾರ್ಥಿನಿ ಆರ್ಯಪ್ರಸೀದ ಹದಿಹರೆಯದ ಹೆಣ್ಣುಮಕ್ಕಳಲ್ಲಿ ನಾಯಕತ್ವವನ್ನು ಬೆಂಬಲಿಸುವಲ್ಲಿ ಸಮಾಜದ ಪಾತ್ರದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅನಾಥ ವಿದ್ಯಾರ್ಥಿಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ಅನ್ನು ವಿತರಿಸಲಾಯಿತು. ಧನ್ವಂತರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮಹಿಳಾ ಸಬಲೀಕರಣ ಕುರಿತು ನಾಟಕ ಪ್ರದರ್ಶಿಸಿದರು.

ಸಮಾರಂಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಧನ್ವಂತರಿ ಕಾಲೇಜ್ ಆಫ್ ನರ್ಸಿಂಗ್‌ನ ಅಧ್ಯಕ್ಷ ಡಾ.ಉಮೇಶ್ ಪ್ರಭು, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ. ಹಾಗೂ ಇತರರು ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿ, ಚೈಲ್ಡ್‌ಲೈನ್ ಸಂಯೋಜಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಚೈಲ್ಡ್‌ಲೈನ್ ಸಹ ನಿರ್ದೇಶಕ ಗುರುರಾಜ್ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News