×
Ad

ಪಾಲ್ಘರ್ ಥಳಿಸಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಅಭ್ಯಂತರವಿಲ್ಲ: ಸುಪ್ರೀಂನಲ್ಲಿ ಮಹಾರಾಷ್ಟ್ರದ ಹೇಳಿಕೆ

Update: 2022-10-11 21:15 IST

ಹೊಸದಿಲ್ಲಿ,ಅ.11:2020ರ ಪಾಲ್ಘರ್ ಥಳಿಸಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ತನ್ನ ಅಭ್ಯಂತರವಿಲ್ಲ ಎಂದು ಮಹಾರಾಷ್ಟ್ರ ಸರಕಾರವು ಮಂಗಳವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ನಿಷ್ಪಕ್ಷ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಉತ್ತರವಾಗಿ ರಾಜ್ಯ ಸರಕಾರವು ಈ ಹೇಳಿಕೆಯನ್ನು ನೀಡಿದೆ.

ಅಕ್ಟೋಬರ್ 2020ರಲ್ಲಿ ಅರ್ಜಿಯನ್ನು ವಿರೋಧಿಸಿದ್ದ ರಾಜ್ಯ ಸರಕಾರವು,ಪೊಲೀಸರು ಪ್ರಕರಣದಲ್ಲಿ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ತಾನು ಈಗಾಗಲೇ ಕ್ರಮವನ್ನು ಕೈಗೊಂಡಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

2020,ಎ.16ರಂದು ಸಿಲ್ವಾಸಾಕ್ಕೆ ಪ್ರಯಾಣಿಸುತ್ತಿದ್ದ ಮೂವರು ಮುಂಬೈ ನಿವಾಸಿಗಳನ್ನು ಪಾಲ್ಘರ್ ಜಿಲ್ಲೆಯ ಗಡಕ್‌ಚಿಂಚಲೆ ಗ್ರಾಮದಲ್ಲಿ ಸ್ಥಳೀಯರ ಗುಂಪು ಕಳ್ಳರೆಂಬ ಶಂಕೆಯಿಂದ ದೊಣ್ಣೆಗಳು ಮತ್ತು ಕಬ್ಬಿಣದ ಸರಳುಗಳಿಂದ ಥಳಿಸಿ ಹತ್ಯೆಗೈಯ್ದಿತ್ತು. ಮೃತರಲ್ಲಿ ಇಬ್ಬರು ಮುಂಬೈನ ಕಾಂದಿವಲಿಯ ನಿವಾಸಿಗಳಾಗಿದ್ದ ಸಾಧುಗಳಾಗಿದ್ದರೆ ಇನ್ನೋರ್ವ ಅವರ ಚಾಲಕನಾಗಿದ್ದ.

ಆ ಸಮಯದಲ್ಲಿ ರಾಜ್ಯದಲ್ಲಿಯ ಮಹಾವಿಕಾಸ ಅಘಾಡಿ ಸರಕಾರದ ವಿರುದ್ಧ ದಾಳಿಯನ್ನು ನಡೆಸಿದ್ದ ಬಿಜೆಪಿಯು,ಪ್ರಕರಣದಲ್ಲಿ ನ್ಯಾಯವನ್ನು ಖಚಿತಪಡಿಸಲು ಅದು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿತ್ತು. ಪ್ರಸ್ತುತ ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಬಣದ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News