×
Ad

ಅಸಮಾನತೆ ಕಡಿಮೆಗೊಳಿಸುವಿಕೆ ರ್ಯಾಂಕಿಂಗ್ : ಭಾರತಕ್ಕೆ 123ನೇ ಸ್ಥಾನ

Update: 2022-10-11 23:38 IST

ಹೊಸದಿಲ್ಲಿ,ಅ.12: ಅಸಮಾನತೆಯನ್ನು ಕಡಿಮೆಗೊಳಿಸುವಿಕೆ ರ್ಯಾಂಕಿಂಗ್‌ನಲ್ಲಿ ಭಾರತವು 163 ದೇಶಗಳ ಪೈಕಿ 123ನೇ ಸ್ಥಾನದಲ್ಲಿದ್ದು, ಆರು ಸ್ಥಾನಗಳಷ್ಟು ಸುಧಾರಣೆ ಕಂಡಿದೆೆ. ಆದರೆ ಆರೋಗ್ಯ ವೆಚ್ಚದ ರ್ಯಾಂಕಿಂಗ್‌ನಲ್ಲಿ ಅದು ಅತ್ಯಂತ ಕಳಪೆ ಸಾಧನೆಯ ರಾಷ್ಟ್ರಗಳ ಸಾಲಿನಲ್ಲಿಯೇ ಉಳಿದುಕೊಂಡಿದೆ ಎಂದು 2022ರ ‘ಅಸಮಾನತೆ ಕಡಿಮೆಗೊಳಿಸುವಿಕೆಗಾಗಿನ ಬದ್ಧತೆಯ ಸೂಚ್ಯಂಕ ’(ಸಿಆರ್‌ಐಐಐ)ದ ವರದಿ ತಿಳಿಸಿದೆ.

ಕೋವಿಡ್19 ಸಾಂಕ್ರಾಮಿಕದ ಹಾವಳಿಯ ಮೊದಲ ಎರಡು ವರ್ಷಗಳಲ್ಲಿ ಅಸಮಾನತೆಯ ವಿರುದ್ಧ ಹೋರಾಡಲು 161 ರಾಷ್ಟ್ರಗಳು ರೂಪಿಸಿದ ನೀತಿಗಳು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ 2022ರ ಸಿಆರ್‌ಐಐ ಸಮೀಕ್ಷೆಯು ಅಧ್ಯಯನ ನಡೆಸಿದೆ.

ಸಿಆರ್‌ಐಐ ರ್ಯಾಂಕಿಂಗ್‌ನಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿಗೆ, ಜರ್ಮನಿ ಹಾಗೂ ಆಸ್ಟ್ರೇಲಿಯ ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.

2020ರಲ್ಲಿ ಸಿಆರ್‌ಐಐ ಸೂಚ್ಯಂಕದಲ್ಲಿ 129ನೇ ರ್ಯಾಂಕ್‌ನಲ್ಲಿದ್ದ ಭಾರತವು 2022ರಲ್ಲಿ ಆರು ಅಂಕಗಳಷ್ಟು ಸುಧಾರಣೆಯನ್ನು ಕಂಡಿದ್ದು, 123ನೇ ರ್ಯಾಂಕ್ ಪಡೆದಿದೆ. ಆದರೆ ಪ್ರಗತಿಪರ ತೆರಿಗೆ ವಿಧಿಸುವಿಕೆ ವಿಧಾನದ ಅಳವಡಿಕೆಯಲ್ಲಿ ಭಾರತವು 16ನೇ ರ್ಯಾಂಕ್‌ನಲ್ಲಿದ್ದು, 2020ರಲ್ಲಿದ್ದುದಕ್ಕಿಂತ ಮೂರು ಅಂಕಗಳಷ್ಟು ಸುಧಾರಣೆಯನ್ನು ಕಂಡಿದೆ.

 ಓಕ್ಸ್‌ಫಾಮ್ ಇಂಟರ್‌ನ್ಯಾಶನಲ್ ಹಾಗೂ ಡೆವಲಪ್‌ಮೆಂಟ್ ಫೈನಾನ್ಸ್ ಇಂಟರ್‌ನ್ಯಾಶನಲ್ (ಡಿಎಫ್‌ಐ) ಈ ಸೂಚ್ಯಂಕವನ್ನು ಸಿದ್ಧಪಡಿಸಿದೆ. ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಸಂರಕ್ಷಣೆ ಈ ಮೂರು ಕ್ಷೇತ್ರಗಳಲ್ಲಿ ಸರಕಾರಗಳು ಅಳವಡಿಸಿದ ನೀತಿಗಳು ಹಾಗೂ ಕೈಗೊಂಡ ಕ್ರಮಗಳಿಂದ ಅಸಮಾನತೆಯ ಕಡಿಮೆಗೊಳಿಸುವಿಕೆಯಲ್ಲಿ ಉಂಟಾಗಿರುವ ಪ್ರಮುಖ ಪರಿಣಾಮಗಳ ವೌಲ್ಯಮಾಪನವನ್ನು ಈ ಸಮೀಕ್ಷೆಯಲ್ಲಿ ನಡೆಸಲಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ವೆಚ್ಚ ಮಾಡುವಿಕೆಯಲ್ಲಿ ಭಾರತದ ಸಾಧನೆ ಈ ಬಾರಿಯೂ ಕಳಪೆಯಾಗಿದೆ. ಈ ವರ್ಷದ ಅದು ಇನ್ನೂ ಎರಡು ಸ್ಥಾನಗಳಷ್ಟು ಕೆಳಕ್ಕೆ ಜಾರಿದ್ದು, 157ನೇ ಸ್ಥಾನದಲ್ಲಿದೆ. ಇದು ಜಗತ್ತಿನಲ್ಲೇ ಐದನೇ ಅತ್ಯಂತ ಕೆಳ ರ್ಯಾಂಕಿಂಗ್ ಆಗಿದೆ.

ಭಾರತದ ಆರೋಗ್ಯ ವೆಚ್ಚವು, ಒಟ್ಟು ವೆಚ್ಚದ ಶೇ.3.54 ಆಗಿದೆ. ಬ್ರಿಕ್ಸ್ ಹಾಗೂ ಇತರ ನೆರೆ ಹೊರೆಯ ದೇಶಗಳಿಗೆ ಹೋಲಿಸಿದರೆ ಎದು ಅತ್ಯಂತ ಕೆಳಮಟ್ಟದ್ದಾಗಿದೆ ಎಂದು ವರದಿ ಹೇಳಿದೆ.

ಆರೋಗ್ಯಕ್ಕಾಗಿ ಚೀನಾ ಹಾಗೂ ರಶ್ಯ ಶೇ.10ರಷ್ಟು ವೆಚ್ಚ ಮಾಡುತ್ತಿದ್ದರೆ, ಬ್ರೆಝಿಲ್ ಶೇ.7.7 ಹಾಗೂ ದಕ್ಷಿಣ ಆಫ್ರಿಕ 12.9ರಷ್ಟು ಗರಿಷ್ಠ ಖರ್ಚು ಮಾಡುತ್ತಿದೆ. ಭಾರತದ ನೆರೆಹೊರೆಯ ದೇಶಗಳಾದ ಪಾಕಿಸ್ತಾನವು 4.3 ಶೇ., ಬಾಂಗ್ಲಾದೇಶ 5.19 ಶೇ., ಶ್ರೀಲಂಕಾ 5.88 ಶೇಕಡ ಹಾಗೂ ನೇಪಾಳ ಶೇ.7.8 ಶೇಕಡದಷ್ಟು ವೆಚ್ಚ ಮಾಡುತ್ತಿದೆಯೆಂದು ವರದಿ ತಿಳಿಸಿದೆ.

ಶತಮಾನದ ಅತ್ಯಂತ ಘೋರ ಆರೋಗ್ಯ ಬಿಕ್ಕಟ್ಟನ್ನು ಎದುರಿಸಿದ ಹೊರತಾಗಿಯೂ ಅರ್ಧದಷ್ಟು ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳು ತಮ್ಮ ಬಜೆಟ್‌ನಲ್ಲಿನ ಆರೋಗ್ಯ ವೆಚ್ಚದ ಪಾಲನ್ನು ಕಡಿತಗೊಳಿಸಿರುವುದಾಗಿ ಸಮೀಕ್ಷಾ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News