ಕೇರಳ 'ನರಬಲಿ' ಪ್ರಕರಣ: ಸಂತ್ರಸ್ತೆಯ ಮಾಂಸ ತಿಂದಿದ್ದ ಆರೋಪಿ; ಪೊಲೀಸ್ ಹೇಳಿಕೆ
ಕೊಚ್ಚಿ,ಅ.12: ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳದಲ್ಲಿ ಆರ್ಥಿಕ ಏಳಿಗೆಗಾಗಿ ನರಬಲಿ ವಿಧಿಯ ಭಾಗವಾಗಿ ಇಬ್ಬರು ಮಹಿಳೆಯರ ಹತ್ಯೆಗಳ ಕುರಿತು ತನಿಖೆಯು ಮುಂದುವರಿಯುತ್ತಿದ್ದಂತೆ ಭೀಕರ ಸಂಗತಿಗಳು ಹೊರಬರತೊಡಗಿವೆ. ಬಂಧಿತ ಮೂವರು ಆರೋಪಿಗಳು ಹತ ಮಹಿಳೆಯೋರ್ವಳ ಮಾಂಸವನ್ನು ಭಕ್ಷಿಸಿದ್ದರು ಎಂದು ಪೊಲೀಸರು ಬುಧವಾರ ತಿಳಿಸಿದರು.
ನಾಪತ್ತೆಯಾಗಿದ್ದ ರೋಸಿಲಿ (49) ಮತ್ತು ಪದ್ಮಂ (52) ಅವರ ಹತ್ಯೆಗಳಿಗೆ ಸಂಬಂಧಿಸಿದಂತೆ ನಾಟಿವೈದ್ಯ ಮತ್ತು ಮಾಲಿಷ್ ವೃತ್ತಿಯ ಭಗವಲ್ ಸಿಂಗ್,ಆತನ ಪತ್ನಿ ಲೈಲಾ ಮತ್ತು ರೆಸ್ಟೋರಂಟ್ ಮಾಲಿಕ ಮುಹಮ್ಮದ್ ಶಫಿ ಅಲಿಯಾಸ್ ರಶೀದ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು. ಆರೋಪಿಗಳನ್ನು ಬುಧವಾರ ಕೊಚ್ಚಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು,ಅ.26ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
‘ಆರೋಪಿಗಳು ಮೊದಲ ಬಲಿಪಶು ರೋಸಿಲಿಯ ದೇಹದ ಮಾಂಸವನ್ನು ಭಕ್ಷಿಸಿದ್ದರು ಎಂಬ ಮಾಹಿತಿ ನಮ್ಮ ಬಳಿಯಿದೆ,ಆದರೆ ಆ ಬಗ್ಗೆ ಯಾವುದೇ ಸಾಕ್ಷಾಧಾರವಿಲ್ಲ. ಪ್ರಕರಣವನ್ನು ಗಮನಿಸಿದರೆ ಇಂತಹ ಘಟನೆಗೆ ಅವಕಾಶವಿದೆ ಮತ್ತು ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ’ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹೊಟ್ಟೆಪಾಡಿಗಾಗಿ ಎರ್ನಾಕುಳಮ್ನಲ್ಲಿ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ರೋಸಿಲಿ ಮತ್ತು ಪದ್ಮಂ ಅವರನ್ನು ಮೂರು ತಿಂಗಳ ಅಂತರದಲ್ಲಿ ಅಪಹರಿಸಲಾಗಿತ್ತು. ರೋಸಿಲಿ ಜೂನ್ 6ರಿಂದ ಮತ್ತು ಪದ್ಮಂ ಸೆ.26ರಿಂದ ನಾಪತ್ತೆಯಾಗಿದ್ದರು. ರಶೀದ್ ಅಶ್ಲೀಲ ವೀಡಿಯೊದಲ್ಲಿ ನಟಿಸಿದರೆ ಹಣವನ್ನು ನೀಡುವುದಾಗಿ ಆಮಿಷವೊಡ್ಡಿ ಅವರನ್ನು ಬಲೆಯಲ್ಲಿ ಸಿಲುಕಿಸಿದ್ದ.
ಅವರಿಬ್ಬರೂ ನಾಪತ್ತೆಯಾಗುವವರೆಗೆ ಆಗಾಗ್ಗೆ ಕೊಚ್ಚಿಯಲ್ಲಿನ ಒಂದೇ ಅಗ್ಗದ ದರಗಳ ರೆಸ್ಟೋರಂಟ್ಗೆ ಭೇಟಿ ನೀಡುತ್ತಿದ್ದರು. ಈ ಮಹಿಳೆಯರು ಎರ್ನಾಕುಳಮ್ನಿಂದ ನಾಪತ್ತೆಯಾದ 24 ಗಂಟೆಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಪದ್ಮಂ ಕುಟುಂಬವು ದಾಖಲಿಸಿದ್ದ ನಾಪತ್ತೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಹತ್ಯೆಗಳು ಬೆಳಕಿಗೆ ಬಂದಿದ್ದವು. ತಮಿಳುನಾಡಿನ ಧರ್ಮಪುರಿ ಮೂಲದ ಪದ್ಮಂ ಕೊಚ್ಚಿಯಲ್ಲಿ ವಾಸವಿದ್ದರು. ಆಕೆ ನಾಪತ್ತೆಯಾದ ಒಂದು ದಿನದ ಬಳಿಕ,ಸೆ.27ರಂದು ಕುಟುಂಬಸ್ಥರು ಪೊಲೀಸ್ ದೂರು ದಾಖಲಿಸಿದ್ದರು. ಪದ್ಮಂ ಮೊಬೈಲ್ ಕರೆಗಳನ್ನು ಜಾಲಾಡಿದ್ದ ಪೊಲೀಸರು ಆಕೆ ಈ ಹಿಂದೆ ಮಾದಕ ದ್ರವ್ಯ ಮಾರಾಟ, ಹಲ್ಲೆ ಮತ್ತು ಅತ್ಯಾಚಾರ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರಶೀದ್ನ ಸಂಪರ್ಕದಲ್ಲಿದ್ದನ್ನು ಪತ್ತೆ ಹಚ್ಚಿದ್ದರು.