ಉಡುಪಿ ನಗರಸಭೆಯಿಂದ ಮಕ್ಕಳಿಗೆ ಅವರ ಹಕ್ಕುಗಳನ್ನು ಒದಗಿಸಲು ಪ್ರಯತ್ನ: ಸುಮಿತ್ರಾ ನಾಯಕ್
ಉಡುಪಿ, ಅ.12: ಉಡುಪಿ ನಗರಸಭೆಯ ವಾರ್ಡ್‌ಗಳಲ್ಲಿರುವ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಹಕ್ಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕೆಲವು ಖಾಸಗಿ ಶಾಲೆಗಳಲ್ಲಿ ಶಿಸ್ತಿನ ಹೆಸರಿನಲ್ಲಿ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಮಕ್ಕಳಿಗೆ ಅವರ ಹಕ್ಕು ಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಹೇಳಿದ್ದಾರೆ.
ಮಂಗಳೂರು ಪಡಿ ಸಂಸ್ಥೆ ಹಾಗೂ ಉಡುಪಿ ನಗರಸಭೆಯ ಜಂಟಿ ಆಶ್ರಯ ದಲ್ಲಿ ಮಕ್ಕಳ ಹಕ್ಕುಗಳು ಮತ್ತು ಸ್ಥಳೀಯ ಸರಕಾರಗಳು ವಿಷಯದ ಕುರಿತು ನಗರಸಭಾ ಚುನಾಯಿತ ಸದಸ್ಯರಿಗೆ ನಗರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಮಕ್ಕಳ ಮತ್ತು ಮಹಿಳೆಯರ ಗ್ರಾಮ ಸಭೆಗಳು ನಗರಸಭೆ ವ್ಯಾಪ್ತಿಯಲ್ಲಿ ನಡೆಯುವುದಿಲ್ಲ. ಅದರ ಬದಲು ಸ್ಥಳೀಯ ನಗರ ಆಡಳಿತಗಳು ಎಲ್ಲ ಜನರಿಗೆ ಒಂದೇ ಕಡೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತದೆ. ಇದೀಗ ನಾವು ಮಕ್ಕಳ ಬಗ್ಗೆ ಆಲೋಚಿಸುವ ಸಮಯ ಬಂದಿದೆ. ಮಕ್ಕಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮುಂದಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಲ್ಲಿ ಕೇಳಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ತರಬೇತಿ ಕಾರ್ಯಾಗಾರ ನಡೆಸಿಕೊಟ್ಟ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಾ.ಪ್ರಮೀಳಾ ಜೆ.ವಾಜ್ ಮಾತನಾಡಿ, ಜಗತ್ತಿನಲ್ಲಿ ಮಕ್ಕಳು ಮತ್ತು ಮಹಿಳೆಯರು ಸಾಕಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಅದಕ್ಕಾಗಿ ಅವರಿಗೆ ಬದುಕು, ರಕ್ಷಣೆ, ವಿಕಾಸ ಹೊಂದುವ ಹಾಗೂ ಭಾಗವಹಿಸುವ ಹಕ್ಕನ್ನು ನೀಡಲಾಗಿದೆ. ಅದನ್ನು ಅವರಿಗೆ ಒದಗಿಸಿಕೊಡುವುದು ಪ್ರತಿ ಸರಕಾರಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳ ವಿಚಾರಗಳಲ್ಲಿ 17 ಗುರಿಗಳನ್ನು ಹೊಂದಲಾಗಿದ್ದು, 2030ಕ್ಕೆ ಅದನ್ನು ಸಾಧಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗು ತ್ತಿದೆ. ಇದರಲ್ಲಿ 7 ಗುರಿಗಳು ಮಕ್ಕಳಿಗೆ ಸಂಬಂಧಿಸಿದ್ದಾಗಿದೆ. ಎಲ್ಲ ಸರಕಾರಗಳು ಸೇರಿ ಕೆಲಸ ಮಾಡಿದರೆ ಈ ಗುರಿ ತಲುಪಲು ಸಾಧ್ಯ. ಬಡತನ ಮುಕ್ತ, ಶಿಕ್ಷಣ ವಂಚಿತರಾಗದಂತೆ ತಡೆ, ತಾರತಮ್ಯ ನಿರ್ಮೂಲನೆ, ಸಮಾನ ಶಿಕ್ಷಣ ನೀಡು ವುದು ಪ್ರಮುಖ ಗುರಿಗಳಾಗಿವೆ ಎಂದು ಅವರು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಪಡಿ ಸಂಸ್ಥೆಯ ಸದಸ್ಯ ವಾಸು ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಎಸ್‌ಡಬ್ಲ್ಯೂ ವಿದ್ಯಾರ್ಥಿ ರಮೇಶ್ ಸ್ವಾಗತಿಸಿದರು. ಸಂಪನ್ಮೂಲ ಕೇಂದ್ರದ ಸಂಯೋಜಕಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು.
ನಗರದಲ್ಲಿ ಮಕ್ಕಳ ಭಿಕ್ಷಾಟನೆ ತಡೆಯಲು ಕ್ರಮ
ನಗರಸಭೆ ವ್ಯಾಪ್ತಿಯಲ್ಲಿ ಮಕ್ಕಳ ಭಿಕ್ಷಾಟನೆ ನಿಲ್ಲಿಸುವ ಅರಿವು ಕಾರ್ಯಕ್ರಮ- ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸುವುದು ಮತ್ತು ಮಕ್ಕಳನ್ನು ಭಿಕ್ಷಾಟನೆ ಯಿಂದ ಮುಕ್ತಿಗೊಳಿಸುವುದು ಸೇರಿದಂತೆ ವಿವಿಧ ಕ್ರಿಯಾಯೋಜನೆ ಗಳನ್ನು ನಗರಸಭೆ ಕೈಗೊಂಡಿತು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವುದು. ವಾರ್ಡ್ ಮಟ್ಟ ದಲ್ಲಿ ಮಕ್ಕಳ ಸಭೆಯನ್ನು ನಡೆಸುವುದು. ಶಾಲಾ ಕಟ್ಟಡ ದುರಸ್ತಿ, ಶೌಚಾಲಯ, ಆವರಣಗೋಡೆ ನಿರ್ಮಾಣ ಮಾಡುವುದು. ಮಕ್ಕಳಿಗೆ ಮತ್ತು ಪೋಷಕರಿಗೆ ಪೋಕ್ಸೋ ಕಾಯಿದೆ ಬಗ್ಗೆ ಅರಿವು ಮೂಡಿಸುವುದು. ಹೊಸ ಅಂಗಡಿವಾಡಿ ಕೇಂದ್ರಗಳಿಗೆ ಬೇಡಿಕೆ ಸಲ್ಲಿಸುವುದು. ಎಲ್ಲ ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಹೆಲ್ಪ್‌ಲೈನ್ ಅಳವಡಿಸುವ ಕುರಿತು ಕ್ರಿಯಾಯೋಜನೆ ಕೈಗೊಳ್ಳಲಾಯಿತು.