×
Ad

ಉಡುಪಿ: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕೃಿಯಗೊಂಡ ಎಂಐಟಿ ವಿದ್ಯಾರ್ಥಿಯ ಅಂಗಾಂಗಗಳ ದಾನ

Update: 2022-10-12 19:15 IST

ಉಡುಪಿ, ಅ.12: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆಯ ಹೊರತಾಗಿಯೂ ಮೆದುಳು ನಿಷ್ಕ್ರೀಯಗೊಂಡ ಮಣಿಪಾಲ ಎಂಐಟಿಯ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕ್ಯವನ್ನು ಪಡೆದಿದ್ದಾರೆ.

19 ವರ್ಷದ ಎಂಐಟಿ ವಿದ್ಯಾರ್ಥಿ ಆಂಧ್ರಪ್ರದೇಶ ಮೂಲದ ವೆಮುಲಾ ಸುದರ್ಶನ್ ಚೌಧರಿ ಇವರು ಅ.9ರ ರಾತ್ರಿ 8.40ರ ಸುಮಾರಿಗೆ ಮಣಿಪಾಲ - ಉಡುಪಿ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯ ಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ  ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದರು.

ಆಂಧ್ರದ ಗುರುಜಾಲ ಮಂಡಾಲ್‌ನ ವೆಮುಲ ಅಲೇಖಾ ಪ್ರಸಾದ್   ಇವರ  ಮಗನಾದ ವೆಮುಲಾ ಸುದರ್ಶನ್ ಚೌಧರಿ ಅವರನ್ನು ಬದುಕಿಸಲು ಕೆಎಂಸಿಯ ತಜ್ಞ ವೈದ್ಯರು ಕೈಲಾದ ಪ್ರಯತ್ನ ನಡೆಸಿದ್ದರೂ ಅಪಘಾತದ ತೀವ್ರತೆಯ  ಪರಿಣಾಮ ವೆಮುಲಾ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡು ಬರಲಿಲ್ಲ. ವೆಮುಲಾ ಸುದರ್ಶನ್ ಚೌಧರಿ ಅವರ ತಂದೆ  ಮತ್ತು ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. 

ಹೀಗಾಗಿ ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಅನುಸಾರ ವೆಮುಲಾ ಸುದರ್ಶನ್ ಚೌಧರಿ ಅವರನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು  ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು. ಮೊದಲ ಬಾರಿ ಅ.11ರ ಸಂಜೆ 4.10ಕ್ಕೆ ಹಾಗೂ ಎರಡನೇ ಬಾರಿಗೆ ಅ.11ರ ರಾತ್ರಿ 11.42ಕ್ಕೆ ಎರಡು ಬಾರಿ  ವೆಮುಲಾರನ್ನು ತಜ್ಞ ವೈದ್ಯರು ಪರೀಕ್ಷಿಸಿದ್ದರು.

ಜೀವನ ಸಾರ್ಥಕತೆ  ಪ್ರೋಟೋಕಾಲ್‌ಗಳು  ಮತ್ತು ನಿರ್ಧಾರಗಳ ಪ್ರಕಾರ, ನೋಂದಾಯಿತ ರೋಗಿಗಳಿಗೆ, ವೆಮುಲಾರ ಯಕೃತ್ತನ್ನು  ಮಂಗಳೂರು ಅಂಬೇಡ್ಕರ್ ಸರ್ಕಲ್‌ನ ಕೆಎಂಸಿ ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ, ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳು, ಒಂದು ಮೂತ್ರಪಿಂಡ ಮತ್ತು ಚರ್ಮವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೊಂದಾಯಿತ ರೋಗಿಗಳಿಗೆ  ಬಳಸಲಾಯಿತು ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ವೆಮುಲ ಅಲೇಖಾ ಪ್ರಸಾದ್ ಮತ್ತು ಕುಟುಂಬ ಸದಸ್ಯರು ಮಗನನ್ನು ಕಳೆದುಕೊಂಡ ದು:ಖದ ಹೊರತಾಗಿಯೂ ಆತನ ಅಂಗಾಂಗಗಳನ್ನು ಸಾವಿನ ದವಡೆಯಲಿದ್ದ ಉಳಿದ ರೋಗಿಗಳಿಗೆ ಜೀವದಾನ ನೀಡಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಅಂಗದಾನ ಒಂದು ಪುಣ್ಯದ ಕೆಲಸ. ಸುದರ್ಶನ್  ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ಎಂದು ತಿಳಿಸಿದ್ದಾರೆ.

‘ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ ಎಂದ ಡಾ.ಅವಿನಾಶ ಶೆಟ್ಟಿ, ಅಂಗದಾನ ಮಾಡಲು  ನಿರ್ಧರಿಸಿದ ವೆಮುಲಾ ಸುದರ್ಶನ್ ಚೌಧರಿ ಕುಟುಂಬಕ್ಕೆ ಕೃತಜ್ಞತೆ  ಸಲ್ಲಿಸಿದರು.  ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಾಗುತ್ತಿರುವುದು ಒಳ್ಳೆಯ ಅಂಶ ಎಂದು ಅಭಿಪ್ರಾಯಪಟ್ಟರು.

ವೆಮುಲಾ ದಾನ  ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಮತ್ತು ಬೆಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News