ಸುರತ್ಕಲ್ ಟೋಲ್‌ಗೇಟ್ ತೆರವಿಗೆ ನೇರ ಕಾರ್ಯಾಚರಣೆ: ಉಡುಪಿಯ ವಿವಿಧ ಸಂಘಟನೆಗಳಿಂದ ಸಂಪೂರ್ಣ ಬೆಂಬಲ
ಉಡುಪಿ, ಅ.12: ಕೇವಲ ಆರು ತಿಂಗಳ ಅವಧಿಗೆಂದು ತಾತ್ಕಾಲಿಕವಾಗಿ ಪ್ರಾರಂಭಗೊಂಡ ಸುರತ್ಕಲ್ ಟೋಲ್‌ಗೇಟ್, ಜನರ ಪ್ರಬಲ ವಿರೋಧದ ಹೊರತಾಗಿಯೂ ಕಳೆದ ಏಳು ವರ್ಷಗಳಿಂದ ಅಕ್ರಮವಾಗಿ ಕಾರ್ಯಾಚರಿಸುತಿದ್ದು, ಇದರ ತೆರವಿಗೆ ಅ.೧೮ರಂದು ನಡೆಯಲಿರುವ ನೇರ ಕಾರ್ಯಾಚರಣೆ ಹಾಗೂ ಟೋಲ್‌ಗೇಟ್ ಮುತ್ತಿಗೆಗೆ ಉಡುಪಿಯ ವಿವಿಧ ಸಂಘಟನೆಗಳೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಉಡುಪಿ ಸಿಪಿಐ (ಎಂ)ನ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಹೋರಾಟಕ್ಕೆ ಬೆಂಬಲ ಘೋಷಿಸಿರುವ ವಿವಿಧ ಸಂಘಟನೆಗಳ ಪದಾಧಿಕಾರಿ ಗಳೊಂದಿಗೆ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಹೋರಾಟದ ಅಂತಿಮ ಘಟ್ಟ ಇದಾಗಿದ್ದು, ಇದರಲ್ಲಿ ಉಡುಪಿಯ ಸಮಾನಮನಸ್ಕ ಸಂಘಟನೆಗಳು, ಸಂಘಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದು ಘೋಷಿಸಿದರು.
ಸಿಐಟಿಯು, ಕಮ್ಯುನಿಸ್ಟ್ ಪಕ್ಷಗಳಲ್ಲದೇ, ವಿವಿಧ ದಲಿತ ಸಂಘಟನೆಗಳು, ಜಿಲ್ಲಾ ಕಾಂಗ್ರೆಸ್, ಕರಾವಳಿಯ ಸಾರಿಗೆ ಯೂನಿಯನ್‌ಗಳು, ಬಸ್ಸು, ಟ್ಯಾಕ್ಸಿ, ಕ್ಯಾಬ್, ಗೂಡ್ಸ್ ಲಾರಿ, ಟ್ರಕ್ ಮಾಲಕರ ಸಂಘಗಳು, ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳ ಸಹ ಅ.18ರ ಹೋರಾಟಕ್ಕೆ ಬೆಂಬಲ ಸೂಚಿಸಿವೆ ಎಂದವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯ ಹತ್ತು ಕಿ.ಮೀ. ಅಂತರದಲ್ಲಿ ಎರಡು ಕಡೆ ಟೋಲ್ ಸಂಗ್ರಹಿಸುವುದು ಕಾನೂನು ಬಾಹಿರ ಎಂದು ಸಂಸತ್‌ನಲ್ಲಿ ಘೋಷಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮೂರು ತಿಂಗಳೊಳಗೆ ಸುರತ್ಕಲ್ ಟೋಲ್‌ಗೇಟ್‌ನ್ನು ಮುಚ್ಚಿಸುವುದಾಗಿ ಆಶ್ವಾಸನೆ ನೀಡಿದ್ದರೂ, ಅದರ ನಂತರ ಮೂರು ತಿಂಗಳು ಕಳೆದರೂ ಟೋಲ್‌ಗೇಟ್ ನಿರಂತರವಾಗಿ ಕಾರ್ಯಾಚರಿಸುತ್ತಿದೆ. ರಾಜ್ಯದಲ್ಲಿ 18 ಇಂಥ ಅಕ್ರಮ ಟೋಲ್‌ಗೇಟ್‌ಗಳಿದ್ದು, ಕರಾವಳಿಯಲ್ಲಿ ಸುರತ್ಕಲ್ ಹಾಗೂ ಬ್ರಹ್ಮರಕೊಟ್ಲುವಿನ ಟೋಲ್‌ಗೇಟ್ ಇದರಲ್ಲಿ ಸೇರಿವೆ ಎಂದು ದಸಂಸ ಅಂಬೇಡ್ಕರ್ ಬಣದ ಜಿಲ್ಲಾ ಸಂಚಾಲಕ ಸುಂದರ ಮಾಸ್ತರ್ ತಿಳಿಸಿದರು.
ಅ.18ರಂದು ನೇರ ಕಾರ್ಯಾಚರಣೆಯ ಮೂಲಕ ಟೋಲ್‌ಗೇಟ್‌ನ್ನು ಮುಚ್ಚಿಸಲಾಗುವುದು. ಅದನ್ನು ಸಂಪೂರ್ಣ ವಾಗಿ ಮುಚ್ಚುವವರೆಗೂ ಹೋರಾಟ ಮುಂದುವರಿಯಲಿದೆ. ಪೊಲೀಸರು ಬಂಧಿಸಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಟೋಲ್ ಸಂಗ್ರಹದ ಹೆಸರಿನಲ್ಲಿ ರಾಜಕೀಯ ಪಕ್ಷವೊಂದು ಕೋಟ್ಯಾಂತರ ರೂ.ಗಳ ದರೋಡೆ ನಡೆಸುತ್ತಿದ್ದು, ರಾಜ್ಯಸರಕಾರ ಕಣ್ಣುಮುಚ್ಚಿ ಕುಳಿತಿದೆ ಎಂದವರು ಆರೋಪಿಸಿದರು.
ಸುರತ್ಕಲ್ ಟೋಲ್‌ಗೇಟ್ ಮುಚ್ಚುಗಡೆಯಾದರೆ, ಹೆಜಮಾಡಿಯ ಟೋಲ್‌ಗೇಟ್‌ನಲ್ಲಿ ಶುಲ್ಕ ಹೆಚ್ಚಿಸುವ ಬಗ್ಗೆ ಸುದ್ದಿ ಕೇಳಿಬರುತಿದ್ದು, ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅ.18ರಂದು ಬೆಳಗ್ಗೆ 9.30ಕ್ಕೆ ಸುರತ್ಕಲ್ ಟೋಲ್‌ಗೇಟ್ ಮುಂಭಾಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸಾವಿರಾರು ಮಂದಿ ಸೇರಿ ಮುತ್ತಿಗೆ ಹಾಕುವ ಕಾರ್ಯಕ್ರಮವಿದೆ. ಒಟ್ಟಾರೆಯಾಗಿ ಅಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆಗೆ ಖಾಯಂ ಅಂತ್ಯ ಹಾಡುವ ನಿರ್ಧಾರ ಮಾಡಲಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದರು.
ಇದಕ್ಕೆ ಪೂರ್ವಭಾವಿಯಾಗಿ ಅ.೧೪ರಂದು ಸಂಜೆ ಉಡುಪಿಯಲ್ಲಿ ವಿವಿಧ ಸಂಘಟನೆಗಳ ಉಪಸ್ಥಿತಿಯಲ್ಲಿ ಹೋರಾಟದ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದೂ ಬಾಲಕೃಷ್ಣ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಕೀರ್ತಿ ಶೆಟ್ಟಿ, ಉಡುಪಿ ಜಿಲ್ಲಾ ಟ್ಯಾಕ್ಸಿ ಮಾಲಕರ ಸಂಘದ ಪ್ರಕಾಶ್ ಅಡಿಗ, ಜಿಲ್ಲಾ ಪಿಂಚಣಿದಾರರ ಸಂಘದ ಸಂಜೀವ ಬಳ್ಕೂರು ಉಪಸ್ಥಿತರಿದ್ದರು.