ಮತ್ತೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದ ಆಮಿರ್‌ ಖಾನ್:‌ ಜಾಹಿರಾತಿನ ಕುರಿತು ವಿವಾದ

Update: 2022-10-12 17:37 GMT

ಹೊಸದಿಲ್ಲಿ: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಮತ್ತು ನಟಿ ಕಿಯಾರಾ ಅಡ್ವಾಣಿ ಅವರನ್ನು ಒಳಗೊಂಡ ಬ್ಯಾಂಕ್ ಜಾಹೀರಾತೊಂದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. ಜಾಹಿರಾತಿನಲ್ಲಿ ಭಾರತೀಯ ಸಂಸ್ಕೃತಿಗಳನ್ನು ಅಗೌರವಿಸಲಾಗಿದೆ ಎಂದು ಜಾಹಿರಾತುದಾರ ಬ್ಯಾಂಕ್‌ ಹಾಗೂ ನಟ-ನಟಿಯರನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲಾಗುತ್ತಿದೆ. 
#AamirKhan_Insults_HinduDharma ಎಂದು ಹಿಂದುತ್ವವಾದಿಗಳು ಟ್ವಿಟರಿನಲ್ಲಿ ಟ್ರೆಂಡಿಂಗ್‌ ಮಾಡುತ್ತಿದ್ದು, ಆಮಿರ್‌ ಖಾನ್‌ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. 

ಜಾಹಿರಾತಿನಲ್ಲಿ ಆಮಿರ್ ಖಾನ್ ಮತ್ತು ಕಿಯಾರ ಅಡ್ವಾಣಿ ವಧು-ವರರಂತೆ ಕಾಣಿಸಿಕೊಂಡಿದ್ದು, ತಮ್ಮ ಮದುವೆಯ ಬಳಿಕ ವಧುವಿನ ಮನೆಗೆ ಬರುವಂತೆ ತೋರಿಸಲಾಗಿದೆ. 'ಬಿದಾಯಿ' ಸಮಯದಲ್ಲಿ ಇಬ್ಬರೂ ಅಳಲಿಲ್ಲ ಎಂದು ಚರ್ಚಿಸುವ ದಂಪತಿಗಳು,  ಸಾಂಪ್ರದಾಯಿಕ ಪದ್ಧತಿಗೆ ವಿರುದ್ಧವಾಗಿ ವಧುವಿನ ಮನೆಗೆ ತಲುಪುವುದನ್ನು ಮತ್ತು ವರನು ಮನೆಗೆ ಮೊದಲ ಹೆಜ್ಜೆ ಇಡುವುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ.

ಇದು ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ನಡುವೆ, ಇದಕ್ಕೆ ಸಂಬಂಧಿಸಿದಂತೆ  ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿದ್ದು,  ಆಮೀರ್ ಖಾನ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಜಾಹೀರಾತುಗಳಿಂದ ದೂರವಿರಬೇಕು ಎಂದು  ಹೇಳಿದ್ದಾರೆ.

  ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ಅಮೀರ್ ಖಾನ್ ಭಾರತೀಯ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಜಾಹೀರಾತುಗಳನ್ನು ಮಾಡಬೇಕು ಎಂದು ಹೇಳಿದರು.

"ನಾನು ದೂರನ್ನು ಸ್ವೀಕರಿಸಿದ ನಂತರ ನಟ ಅಮೀರ್ ಖಾನ್ ಅವರ ಖಾಸಗಿ ಬ್ಯಾಂಕ್‌ನ ಜಾಹೀರಾತನ್ನು ನೋಡಿದ್ದೇನೆ. ಭಾರತೀಯ ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ಅಂತಹ ಜಾಹೀರಾತುಗಳನ್ನು ಮಾಡುವಂತೆ ನಾನು ಅವರನ್ನು ವಿನಂತಿಸುತ್ತೇನೆ. ನಾನು ಅದನ್ನು ಸೂಕ್ತವೆಂದು ಪರಿಗಣಿಸುವುದಿಲ್ಲ. ಭಾರತೀಯ ಸಂಪ್ರದಾಯಗಳು ಮತ್ತು ದೇವತೆಗಳ ಬಗ್ಗೆ ಇಂತಹ ವಿಷಯಗಳು ಬರುತ್ತಲೇ ಇರುತ್ತವೆ, ವಿಶೇಷವಾಗಿ ಅಮೀರ್ ಖಾನ್ ಬಗ್ಗೆ. ನಿರ್ದಿಷ್ಟ ಧರ್ಮದ ಭಾವನೆಗಳಿಗೆ ಇಂತಹ ಕೃತ್ಯಗಳಿಂದ ನೋವುಂಟುಮಾಡುತ್ತದೆ. ಅವರು ಯಾರ ಭಾವನೆಗಳನ್ನು ನೋಯಿಸಲು ಅನುಮತಿಸುವುದಿಲ್ಲ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News