×
Ad

ಟ್ವೆಂಟಿ-20 ವಿಶ್ವಕಪ್: ಜಸ್‌ಪ್ರೀತ್ ಬುಮ್ರಾ ಬದಲಿಗೆ ಮುಹಮ್ಮದ್ ಶಮಿ ಆಯ್ಕೆ

Update: 2022-10-14 17:07 IST
photo: @BCCI

ಹೊಸದಿಲ್ಲಿ, ಅ.14: ಆಸ್ಟ್ರೇಲಿಯದಲ್ಲಿ ಅಕ್ಟೋಬರ್ 16ರಿಂದ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ಭಾರತದ 15 ಸದಸ್ಯರ ಕ್ರಿಕೆಟ್ ತಂಡದಲ್ಲಿ ಗಾಯಗೊಂಡಿರುವ ಜಸ್‌ಪ್ರೀತ್ ಬುಮ್ರಾ ಬದಲಿಗೆ ಮುಹಮ್ಮದ್ ಶಮಿಯವರಿಗೆ Mohammed Shami  ಮಣೆ ಹಾಕಲಾಗಿದೆ.

ಶಮಿ ಈ ಮೊದಲು ಟ್ವೆಂಟಿ-20 ವಿಶ್ವಕಪ್‌ನ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಬೆನ್ನುನೋವಿನಿಂದಾಗಿ ಬುಮ್ರಾ ವಿಶ್ವಕಪ್‌ನಿಂದ ಹೊರಗುಳಿದ ಹಿನ್ನೆಲೆಯಲ್ಲಿ ಹಿರಿಯ ವೇಗಿ ಶಮಿಗೆ ಟೀಮ್ ಇಂಡಿಯಾದ ಬಾಗಿಲು ತೆರೆದಿದೆ.

ಮುಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಅವರು ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದು ಶೀಘ್ರವೇ ಆಸ್ಟ್ರೇಲಿಯಕ್ಕೆ ಪ್ರಯಾಣಿಸಲಿದ್ದಾರೆ.

ಬುಮ್ರಾ ಅವರಿಂದ ತೆರವಾದ ಸ್ಥಾನ ಭರ್ತಿ ಮಾಡಲು ದೀಪಕ್ ಚಹಾರ್ ಸ್ಪರ್ಧೆಯಲ್ಲಿದ್ದರು. ಆದರೆ ಅವರು ಕೂಡ ಗಾಯಗೊಂಡ ಕಾರಣ ರೇಸ್‌ನಿಂದ ಹೊರಬಿದ್ದರು.

ಭಾರತವು ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ಭಾರತದ ಟ್ವೆಂಟಿ-20 ವಿಶ್ವಕಪ್ ತಂಡಕ್ಕೆ ಜಸ್‌ಪ್ರೀತ್ ಬುಮ್ರಾ ಬದಲಿಗೆ ಮುಹಮ್ಮದ್ ಶಮಿಯವರನ್ನು ನೇಮಿಸಿದೆ. ಶಮಿ ಆಸ್ಟ್ರೇಲಿಯಕ್ಕೆ ತೆರಳಲಿದ್ದು, ಅಭ್ಯಾಸ ಪಂದ್ಯಗಳಿಗಿಂತ ಮೊದಲು ಬ್ರಿಸ್ಬೇನ್‌ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಭಾರತದ ವೇಗದ ಬೌಲಿಂಗ್ ಸರದಿಯಲ್ಲೀಗ ಶಮಿ, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್ ಹಾಗೂ ಅರ್ಷದೀಪ್ ಸಿಂಗ್ ಅವರಿದ್ದಾರೆ.

 ಈ ಹಿಂದೆ ದಿಲಿಪ್ ವೆಂಗ್‌ಸರ್ಕಾರ್ ಹಾಗೂ ಕೆ.ಶ್ರೀಕಾಂತ್ ಸಹಿತ ಹಲವು ಮಾಜಿ ಕ್ರಿಕೆಟಿಗರು ಶಮಿ ಅವರನ್ನು ಟೀಮ್ ಇಂಡಿಯಾಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರು. ಶಮಿ 2022ರ ಐಪಿಎಲ್ ಚಾಂಪಿಯನ್ ಗುಜರಾತ್ ಟೈಟಾನ್ಸ್ ಪರ 16 ಪಂದ್ಯಗಳಲ್ಲಿ ಒಟ್ಟು 20 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಟೂರ್ನಿಯಲ್ಲಿ ಗುಜರಾತ್ ಪರ ಗರಿಷ್ಠ ಕಬಳಿಸಿದ್ದರು.
 
ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಕೆ.ಎಲ್.ರಾಹುಲ್(ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್(ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮುಹಮ್ಮದ್ ಶಮಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News