ಕಾಂಗ್ರೆಸ್ ನಿಂದಲೇ ಕಾಣೆಯಾಗಿದೆ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ !

Update: 2022-10-15 12:08 GMT
Photo: PTI

ರಾಹುಲ್‌ ಗಾಂಧಿ ನಾಯಕತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯು ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದರೂ, ಹಲವಾರು ಕಾಂಗ್ರೆಸ್‌ ನಾಯಕರೇ ಈ ಕುರಿತು ಸಾಮಾಜಿಕ ತಾಣದಲ್ಲಿ ಟ್ವೀಟ್‌, ರಿಟ್ವೀಟ್‌ ಸೇರಿದಂತೆ ಯಾವುದೇ ರೀತಿಯ ಪ್ರಚಾರ ಮಾಡದಿರುವ ಕುರಿತು ಹಿರಿಯ ಪತ್ರಕರ್ತ ಹಾಗೂ ಎನ್ ಡಿಟಿವಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ರವೀಶ್‌ ಕುಮಾರ್‌ ಸ್ವತಃ ಅಧ್ಯಯನ ನಡೆಸಿ ವರದಿಯೊಂದನ್ನು ಮುಂದಿಟ್ಟಿದ್ದಾರೆ.

ಅವರ ಅಧ್ಯಯನದ ವರದಿಯ ಅನುವಾದ ಇಲ್ಲಿದೆ:

ಭಾರತ್ ಜೋಡೋ ಯಾತ್ರೆಯ ಕವರೇಜ್‌ನ್ನು ವಿಶ್ಲೇಷಿಸುತ್ತಿದ್ದೆ. ಈ ಯಾತ್ರೆಯ ಕುರಿತು ಕಾಂಗ್ರೆಸ್‌ನ ಟ್ವಿಟರ್ ಹ್ಯಾಂಡಲ್‌ನಿಂದ ಬಿಡುಗಡೆಯಾಗುತ್ತಿರುವ ವೀಡಿಯೊಗಳಿಗೆ ಪ್ರತಿಕ್ರಿಯೆ ಹೇಗಿದೆ ಎನ್ನುವುದನ್ನು ಮೊದಲು ಪರಿಶೀಲಿಸಿದೆ. ತಮ್ಮ ಹ್ಯಾಂಡಲ್‌ಗಳಿಗೆ ಯಾತ್ರೆಯ ವೀಡಿಯೊ ಬರುವಂತಾಗಲು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರು ಅದನ್ನು ಮರುಟ್ವೀಟ್ ಮಾಡುತ್ತಿದ್ದಾರೆಂದು ಇಟ್ಟುಕೊಳ್ಳೋಣ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯನ್ನು ಪ್ರಚಾರ ಮಾಡಲು ಎಷ್ಟು ಶ್ರಮಿಸುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ನೆರವಾಗಬಹುದು. ನಾನು ಫೇಸ್‌ಬುಕ್ ಮತ್ತು ಯುಟ್ಯೂಬ್ ಪೇಜ್ ನೋಡಿಲ್ಲ.
  
ಭಾರತ್ ಜೋಡೋ ಹೆಸರಿನ ಟ್ವಿಟರ್ ಹ್ಯಾಂಡಲ್‌ನ್ನು ಒಂದು ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಮರುಟ್ವೀಟ್, ಕಮೆಂಟ್ ಮತ್ತು ಲೈಕ್ ಮಾಡಲು ಬಟನ್‌ಗಳಿರುವ ವೀಡಿಯೊದ ಕೆಳಭಾಗವನ್ನು ನೋಡುತ್ತಿದ್ದೆ. ಅನೇಕ ಪತ್ರಕರ್ತರೂ ಈ ಹ್ಯಾಂಡಲ್‌ನ್ನು ಫಾಲೋ ಮಾಡುತ್ತಿದ್ದಾರೆ ಎನ್ನುವುದು ಗಮನದಲ್ಲಿರಲಿ, ನಾನೂ ಸಹ ಅದನ್ನು ಫಾಲೋ ಮಾಡುತ್ತೇನೆ. ಈ ಹ್ಯಾಂಡಲ್‌ನಲ್ಲಿ ಪಿನ್ ಮಾಡಲಾದ ಒಂದು ಟ್ವೀಟ್‌ನ್ನು 281 ಜನರು ಮರುಟ್ವೀಟ್ ಮಾಡಿದ್ದಾರೆ, 616 ಜನರು ಲೈಕ್ ಮಾಡಿದ್ದಾರೆ ಮತ್ತು 10 ಕಮೆಂಟ್‌ಗಳಿವೆ. ನಾನು ಹತ್ತಿಪ್ಪತ್ತು ಟ್ವೀಟ್‌ಗಳನ್ನು ನೋಡಿದಾಗ ಪ್ರತಿ ಟ್ವೀಟ್ 200ರಿಂದ 500 ಸಲ ಮರುಟ್ವೀಟ್ ಆಗುತ್ತಿದೆ ಎನ್ನುವುದು ಅಂದಾಜಾಯಿತು. ಕಾಂಗ್ರೆಸ್ ಪಕ್ಷದಲ್ಲಿ ಇಷ್ಟೇ ನಾಯಕರು ಮತ್ತು ಕಾರ್ಯಕರ್ತರಿದ್ದಾರೆಯೇ? ಇಷ್ಟೇ ಅಲ್ಲ, ಬಿಜೆಪಿಯಂತೆ ಕಾಂಗ್ರೆಸ್ ಕೂಡ ಐಎನ್‌ಸಿಟಿವಿ ಹೆಸರಿನ ತನ್ನದೇ ಟಿವಿ ಚಾನೆಲ್‌ನ್ನು ಹೊಂದಿದೆ ಮತ್ತು ಇದರ ಟ್ವಿಟರ್ ಹ್ಯಾಂಡಲ್‌ನ್ನು 70,000ಕ್ಕೂ ಕಡಿಮೆ ಜನರು ಫಾಲೋ ಮಾಡುತ್ತಿದ್ದಾರೆ. ಇಲ್ಲಿ ಹಾಕಿರುವ ವೀಡಿಯೊವನ್ನು ಇನ್ನೂ ಕಡಿಮೆ ಜನರು ಶೇರ್ ಮತ್ತು ಲೈಕ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖ್ಯ ಟ್ವಿಟರ್ ಹ್ಯಾಂಡಲ್‌ನ್ನು 88 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ನೀವು ಎಲ್ಲಕ್ಕೂ ಮೊದಲು ನೋಡುವ, ಈ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿರುವ ವೀಡಿಯೊವನ್ನು 611 ಜನರು ಮರುಟ್ವೀಟ್ ಮಾಡಿದ್ದು,1231 ಲೈಕ್‌ಗಳಿವೆ. ಈ ಲೇಖನಕ್ಕಾಗಿ ನಾನು ನೋಡುತ್ತಿದ್ದಾಗ 7,300 ಜನರು ಈ ವೀಡಿಯೊವನ್ನು ವೀಕ್ಷಿಸಿದ್ದರು. ಇತರ ಕೆಲವು ವೀಡಿಯೊಗಳನ್ನು ನೋಡಿದಾಗ ಅವುಗಳನ್ನೂ ಕೆಲವೇ ಜನರು ಮರುಟ್ವೀಟ್ ಮಾಡಿದ್ದು ಕಂಡುಬಂದಿತ್ತು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಯಾತ್ರೆಯಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಅವರು ಯಾತ್ರೆಯ ಪ್ರಚಾರದಲ್ಲಿ ಸಕ್ರಿಯರಾಗಿಲ್ಲ.

ನೀವು ಟ್ವಿಟರ್‌ಗೆ ಹೋಗಿ ನೋಡಿದಾಗ ಭಾರತ ಜೋಡೋ ಯಾತ್ರೆಯು ಬಿರುಗಾಳಿಯನ್ನೇ ಸೃಷ್ಟಿಸಿದೆ ಎಂದು ಭಾಸವಾಗಬಹುದು. ಬಹಳಷ್ಟು ವೀಡಿಯೊಗಳು ಬರುತ್ತಿವೆ. ಈ ಯಾತ್ರೆಯ ಪ್ರಚಾರದ ಹೊಣೆಯನ್ನು ಹೊತ್ತಿರುವ ಜೈರಾಮ್ ರಮೇಶ್ ಅವರ ಟ್ವಿಟರ್ ಹ್ಯಾಂಡಲ್‌ನ್ನು ಎರಡೂವರೆ ಲಕ್ಷಕ್ಕೂ ಕಡಿಮೆ ಜನರು ಫಾಲೋ ಮಾಡುತ್ತಿದ್ದಾರೆ. ರಮೇಶ್ ರ ಹ್ಯಾಂಡಲ್‌ನ್ನು ನೋಡಿದಾಗ ಅವರೂ ಯಾತ್ರೆಯ ಪ್ರಚಾರವನ್ನು ಮಾಡುತ್ತಿದ್ದಾರೆ ಮತ್ತು ಕಾಶ್ಮೀರ ವಿಷಯವಾಗಿ ಬಿಜೆಪಿಯೊಂದಿಗೆ ಸಂಘರ್ಷವನ್ನೂ ನಡೆಸುತ್ತಿದ್ದಾರೆ ಎಂದು ಅನ್ನಿಸುತ್ತದೆ. ಅವರು ಸರಕಾರದ ಸುಳ್ಳುಗಳಿಗೆ ಉತ್ತರಿಸುತ್ತಿದ್ದಾರೆ ಮತ್ತು ಮಾಧ್ಯಮಗಳಿಗೆ ಎಚ್ಚರಿಕೆಗಳನ್ನು ನೀಡುತ್ತಲೂ ಇದ್ದಾರೆ. ಅಪಪ್ರಚಾರಗಳನ್ನು ಗಮನಿಸಿ ನೋಟಿಸ್‌ಗಳನ್ನು ಕಳುಹಿಸುತ್ತಿದ್ದಾರೆ. ಪಕ್ಷವು ಆಕ್ರಮಣಕಾರಿಯಾಗಿದೆ ಎಂದೂ ಅನ್ನಿಸುತ್ತದೆ, ಆದರೆ ಅದರ ಆಕ್ರಮಣದಲ್ಲಿ ಗಾಳಿಯಲ್ಲಿ ತಲವಾರನ್ನು ಝಳಪಿಸಿದಂತೇನೂ ಅಲ್ಲ. ಇದನ್ನು ತನ್ನ ನಾಯಕರು 37 ದಿನಗಳಿಂದ ಪಾದಯಾತ್ರೆ ಮಾಡುತ್ತಿರುವ ಪಕ್ಷವು ನೋಡಬೇಕಿದೆ.

ಆದರೆ ರಮೇಶ್ ರ ಟ್ವೀಟ್‌ನ ಸ್ಥಿತಿಯೂ ಅದೇ ಆಗಿದೆ. ಅವರು ಟ್ವೀಟ್ ಮಾಡುತ್ತಾರೆ, ಬಳಿಕ ಅದನ್ನು ಭಾರತ ಜೋಡೋದ ಟ್ವಿಟರ್ ಹ್ಯಾಂಡಲ್‌ನಿಂದ ಮರುಟ್ವೀಟ್ ಮಾಡಲಾಗುತ್ತದೆ ಅಥವಾ ಭಾರತ ಜೋಡೋ ಹ್ಯಾಂಡಲ್‌ನಿಂದ ಮಾಡಲಾಗುವ ಟ್ವೀಟ್‌ನ್ನು ಜೈರಾಮ್ ರಮೇಶ ಮರುಟ್ವೀಟ್ ಮಾಡುತ್ತಾರೆ ಎನ್ನುವುದೂ ಅನೇಕ ಸಲ ಕಂಡುಬಂದಿದೆ. ಇದರಿಂದಾಗಿ ಈ ಟ್ವೀಟ್‌ಗಳು ಒಳಗೊಳಗೇ ಸುತ್ತಾಡುತ್ತಿವೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಶಶಿ ತರೂರ್ ಓರ್ವ ಅಭ್ಯರ್ಥಿಯಾಗಿದ್ದಾರೆ. ತರೂರ್ ಅವರ ಟ್ವಿಟರ್ ಹ್ಯಾಂಡಲ್ ಸರಿಸುಮಾರು ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್‌ನಷ್ಟೇ ಫಾಲೋವರ್‌ಗಳನ್ನು ಹೊಂದಿದೆ. ತರೂರ್‌ರನ್ನು 84 ಲಕ್ಷ ಜನರು ಮತ್ತು ಕಾಂಗ್ರೆಸ್‌ನ್ನು 88 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ತರೂರ್ ಭಾರತ ಜೋಡೋ ಯಾತ್ರೆಯ ವೀಡಿಯೊವನ್ನು ಟ್ವೀಟ್ ಮಾಡುತ್ತಾರೆ ಅಥವಾ ಮರುಟ್ವೀಟ್ ಮಾಡುತ್ತಾರೆ. ನಾನು ತರೂರ್‌ರ ಮೊದಲ 20 ಟ್ವೀಟ್‌ಗಳ ಮೇಲೆ ಕಣ್ಣು ಹಾಯಿಸಿದ್ದೆ. ಈ 20 ಟ್ವೀಟ್‌ಗಳ ಪೈಕಿ 19 ಅವರ ಚುನಾವಣಾ ಪ್ರಚಾರ ಮತ್ತು ಪ್ರಣಾಳಿಕೆಯ ಕುರಿತಾಗಿದ್ದು, ಒಂದು ಟ್ವೀಟ್ ಮಾತ್ರ ಯಾತ್ರೆಯ ಕುರಿತಾಗಿತ್ತು. ಇದು ಕಾಂಗ್ರೆಸ್‌ಗೆ ನೇತೃತ್ವ ನೀಡಲು ಬಯಸುತ್ತಿರುವ ಮತ್ತು ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಪಾದಯಾತ್ರೆಯ ಕುರಿತು ಟ್ವೀಟ್ ಮಾಡುವ ಗೋಜಿಗೆ ಹೋಗದ, ಮರುಟ್ವೀಟ್ ಮಾಡದ ವ್ಯಕ್ತಿಯ ಟ್ವಿಟರ್ ಹ್ಯಾಂಡಲ್! 25 ಟ್ವೀಟ್‌ಗಳ ಬಳಿಕ ತರೂರ್ ರಾಹುಲ್ ಗಾಂಧಿಯವರ ಹ್ಯಾಂಡಲ್‌ನಿಂದ ಮಾಡಲಾಗಿದ್ದ ವೀಡಿಯೊ ಟ್ವೀಟ್‌ನ್ನು ಮರುಟ್ವೀಟ್ ಮಾಡಿದ್ದರು. ಈ ವೀಡಿಯೊದಲ್ಲಿ ರಾಹುಲ್ ನಿರುದ್ಯೋಗದ ಕುರಿತು ಮಾತನಾಡಿದ್ದರು. ಆರಂಭದಿಂದ ತರೂರ್‌ರ ಟ್ವೀಟ್‌ಗಳನ್ನು ಜಾಲಾಡಿದಾಗ ಅವರ ಟ್ವಿಟರ್ ಹ್ಯಾಂಡಲ್ ಕಾಂಗ್ರೆಸ್ ಬಗ್ಗೆ ಕಡಿಮೆ ಮತ್ತು ತನ್ನ ಬಗ್ಗೆಯೇ ಹೆಚ್ಚು ಸದ್ದುಮಾಡಿದ್ದು ಕಂಡುಬರುತ್ತಿದೆ.

ಬಳಿಕ ನಾನು ಇನ್ನೋರ್ವ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರ ಟ್ವಿಟರ್ ಹ್ಯಾಂಡಲ್ ಕಡೆಗೆ ದೃಷ್ಟಿ ಹಾಯಿಸಿದ್ದೆ. ಖರ್ಗೆ ಸಾಹೇಬ್‌ರನ್ನು ಒಂದು ಲಕ್ಷಕ್ಕೂ ಕಡಿಮೆ ಜನರು ಫಾಲೋ ಮಾಡುತ್ತಿದ್ದಾರೆ. ಅವರ ಮೊದಲ ಟ್ವೀಟ್ ತನ್ನ ಚುನಾವಣಾ ಪ್ರಚಾರದ ಕುರಿತು ಆಗಿದ್ದರೆ ಎರಡನೇ ಟ್ವೀಟ್ ರಾಹುಲ್‌ರ ವೀಡಿಯೊ ಆಗಿತ್ತು. 11 ಟ್ವೀಟ್‌ಗಳಲ್ಲಿ ಎರಡನೆಯದು ರಾಹುಲ್‌ರ ಯಾತ್ರೆಯ ಕುರಿತಾಗಿದ್ದರೆ ಉಳಿದವು ಕಾಂಗ್ರೆಸ್‌ನ ವಿಚಾರಧಾರೆ ಮತ್ತು ಕಾಂಗ್ರೆಸ್‌ನಲ್ಲಿ ಖರ್ಗೆಯವರ ಪಯಣವನ್ನು ಬಣ್ಣಿಸಿದ್ದವು. 12 ಮತ್ತು 13ನೇ ಟ್ವೀಟ್‌ಗಳಲ್ಲಿ ಖರ್ಗೆಯವರು ಮತ್ತೆ ರಾಹುಲ್‌ರ ಯಾತ್ರೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಇಲ್ಲಿಯೂ ಕೂಡ ಅದು ಯಾರೇ ಟ್ವೀಟ್ ಅಥವಾ ಮರುಟ್ವೀಟ್ ಮಾಡಿದ್ದಾಗಿರದೆ ವೀಡಿಯೊವನ್ನು ನೇರವಾಗಿ ಅಪ್‌ಲೋಡ್ ಮಾಡಲಾಗಿದೆ.
  
ಟ್ವಿಟರ್‌ನಲ್ಲಿ ಈ ಹ್ಯಾಂಡಲ್‌ಗಳನ್ನು ನೀವು ಫಾಲೋ ಮಾಡಿದರೆ ಅದೇ ವೀಡಿಯೊ ಮತ್ತೆ ಮತ್ತೆ ಕಂಡು ಬರುತ್ತದೆ, ಆದರೆ ಕಾಂಗ್ರೆಸ್‌ನ ದೃಷ್ಟಿಯಲ್ಲಿ ಈ ಯಾತ್ರೆಯ ಕುರಿತು ಉತ್ಸಾಹವನ್ನು ನೋಡಿದರೆ ಉಳಿದ ಕಾರ್ಯಕರ್ತರು ಮತ್ತು ನಾಯಕರು ಟ್ವೀಟ್‌ಗಳನ್ನು ಮತ್ತು ಲೈಕ್ ಮಾಡಲೂ ಶ್ರಮಪಡಲು ಬಯಸುತ್ತಿಲ್ಲ ಎಂದು ಅನ್ನಿಸುತ್ತಿದೆ. ಗ್ರಾಮದಲ್ಲೊಂದು ನಾಣ್ಣುಡಿಯಿದೆ; ಉಗ್ರರನ್ನು ಕತ್ತರಿಸಿಕೊಂಡು ಹುತಾತ್ಮರಾಗುವುದು. ಆದರೆ ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಉಗುರುಗಳನ್ನೂ ಕತ್ತರಿಸಿಕೊಳ್ಳುತ್ತಿಲ್ಲ. ಲೈಕ್‌ಗಳನ್ನೂ ಮಾಡುತ್ತಿಲ್ಲ. ಇದು ಮೋದಿ ಮತ್ತು ಅಮಿತ್ ಶಾ ಯಾತ್ರೆಯಾಗಿದ್ದರೆ ಎಲ್ಲ ಸಚಿವರು ಕೆಲಸ ಬಿಟ್ಟು ಇಡೀ ದಿನ ಟ್ವೀಟ್ ಮಾಡುತ್ತಿದ್ದರು ಮತ್ತು ಸುದ್ದಿಗಾರರನ್ನು ಕರೆದು ಎಂತಹ ದೊಡ್ಡ ಮಾತುಗಳನ್ನಾಡಿದ್ದಾರೆ ಎಂಬಂತೆ ಬೈಟ್‌ಗಳನ್ನು ನೀಡುತ್ತಿದ್ದರು. ಸಂಜೆಯಾಗುವುದರೊಳಗೆ ಸುಳ್ಳನ್ನು ಸತ್ಯ ಮಾಡುತ್ತಿದ್ದರು. ಟ್ವಿಟರ್‌ನಲ್ಲಿ ಹಂಗಾಮಾ ಮಾಡುವುದರಿಂದ ಜನರ ಮಧ್ಯೆ ಸಂದೇಶಗಳು ತಲುಪುವುದಿಲ್ಲ ಎನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಆದರೆ ಈ ಯಾತ್ರೆ ಟ್ವಿಟರ್‌ಗಾಗಿಯೇ ಇದ್ದರೆ ಆಗ ಮಾತನಾಡುವುದೇನೂ ಇಲ್ಲ.

ಅಪ್‌ಲೋಡ್ ಮಾಡಲಾಗುತ್ತಿರುವ ವೀಡಿಯೊಗಳ ಎಡಿಟಿಂಗ್ ಮತ್ತು ಕ್ಯಾಮೆರಾ ನೋಟ ಏಕತಾನತೆಯಿಂದ ಕೂಡಿವೆ. ಅವೇ ಡ್ರೋನ್ ಶಾಟ್‌ಗಳು ಮತ್ತು ಅಬ್ಬರದ ಸಂಗೀತ ಢಾಳಾಗಿ ಕಂಡುಬರುತ್ತಿದೆ ಮತ್ತು ಇದು ವೀಡಿಯೊಗಳನ್ನು ಕೃತಕವಾಗಿಸುತ್ತಿದೆ. ಜನರ ಹೇಳಿಕೆಗಳು ತುಂಬ ಕಡಿಮೆ. ಈ ಯಾತ್ರೆಯಲ್ಲಿ ಏಕಾಗಿ ಜನರು ಪಾಲ್ಗೊಳ್ಳುತ್ತಿದ್ದಾರೆ, ಮೋದಿ ಸರಕಾರದ ಯಾವ ನೀತಿಗಳನ್ನು ಖಂಡಿಸುತ್ತಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ವೀಡಿಯೊಗಳನ್ನು ಕಾಂಗ್ರೆಸ್ ತಂಡ ಎಡಿಟ್ ಮಾಡುತ್ತಿದೆ, ಹೀಗಿರುವಾಗ ಎಡಿಟಿಂಗ್ ಹಂತದಲ್ಲಿ ಪಾದಯಾತ್ರೆಯ ವಾತಾವರಣವೇ ಏಕೆ ಮಾಯವಾಗುತ್ತಿದೆ?

ವೀಡಿಯೊಗಳು ಏಕತಾನತೆಯಿಂದ ಕೂಡಿದ್ದು ಬೇಸರ ತರಿಸುತ್ತಿವೆ. ರಾಹುಲ್‌ರ ಭಾಷಣಗಳು ಕಡಿಮೆಯಿವೆ, ಸಂಜೆ ಎಲ್ಲೋ ಅವರು ಭಾಷಣ ಮಾಡುತ್ತಾರೆ ಮತ್ತು ಅದು ನೇರಪ್ರಸಾರವಾಗಬೇಕು. ಅವರ ಅನೇಕ ವೀಡಿಯೋಗಳು ತಡರಾತ್ರಿ ಟ್ವೀಟ್ ಮಾಡಲ್ಪಟ್ಟಿವೆ. ಶಿಕ್ಷಣ ಮತ್ತು ಭಾಷೆ ಕುರಿತು ರಾಹುಲ್ ಭಾಷಣವನ್ನು ರಾತ್ರಿ 9:30ಕ್ಕೆ ಟ್ವೀಟ್ ಮಾಡಲಾಗಿದೆ. ಇಷ್ಟೊಂದು ತಡವೇಕೆ ಎನ್ನುವುದು ಪ್ರಶ್ನೆ, ಯಾರಿಗಾಗಿ ಈ ವೀಡಿಯೊ ಟ್ವೀಟ್ ಮಾಡಲ್ಪಟ್ಟಿದೆ? ಮಾಧ್ಯಮಗಳು ಅದನ್ನು ತೋರಿಸುವುದಿಲ್ಲ, ರಾಹುಲ್‌ರ ಮಾತುಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಾಗುತ್ತಿಲ್ಲ!

ಈಗ ಮಾಧ್ಯಮಗಳು ಮತ್ತು ಗೋದಿ ಮೀಡಿಯಾದ ಕವರೇಜ್‌ಗೆ ಬರೋಣ. ಈ ಯಾತ್ರೆಯ ಕುರಿತು ದಕ್ಷಿಣ ಭಾರತದಲ್ಲಿ ಕವರೇಜ್ ಬಗ್ಗೆ ನನಗೆ ತಿಳಿದಿಲ್ಲ. ಅಲ್ಲಿ ವರದಿ ಮಾಡಲಾಗುತ್ತಿದೆ ಎಂದು ಭಾವಿಸಿದ್ದೇನೆ. ಆದರೆ ಉತ್ತರ ಭಾರತದ ಹೆಚ್ಚಿನ ಪ್ರಮುಖ ಹಿಂದಿ ಪತ್ರಿಕೆಗಳು ಹಲವಾರು ದಿನಗಳಿಂದ ಯಾತ್ರೆಯ ವರದಿಗಳನ್ನು ಪ್ರಕಟಿಸುತ್ತಿಲ್ಲ. ಮಾಧ್ಯಮಗಳು ಯಾತ್ರೆಯನ್ನು ವರದಿ ಮಾಡುವುದಿಲ್ಲ ಎನ್ನುವುದು ಕಾಂಗ್ರೆಸ್‌ಗೂ ಗೊತ್ತಿದೆ. ಯಾತ್ರೆಯ ಒಂದೇ ಒಂದು ಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾಗಿಲ್ಲ. ಗೋದಿ ಮೀಡಿಯಾದ ಚಾನೆಲ್‌ಗಳಲ್ಲಿ ಭಾರತ ಜೋಡೋ ಯಾತ್ರೆಗೆ ಬಹಿಷ್ಕಾರವೂ ಇದೆ. ಜೈರಾಮ್ ರಮೇಶ್ ರನ್ನು ಬಹಳಷ್ಟು ಹೊಗಳಲಾಗುತ್ತಿದೆ, ಕಾಂಗ್ರೆಸ್ ವಕ್ತಾರರೂ ಸಕ್ರಿಯರಾಗಿದ್ದಾರೆ, ಆದರೆ ಯಾತ್ರೆಯ ಕುರಿತು ಮಾಧ್ಯಮಗಳ ಬಹಿಷ್ಕಾರ ಮತ್ತು ಸೆನ್ಸಾರ್‌ನ್ನು ಭೇದಿಸಲು ಅವರಿಗೆ ಸಾಧ್ಯವಾಗಿಲ್ಲ. ದೇಶದಲ್ಲಿ ಒಬ್ಬನೇ ನಾಯಕ ಕಾಣುವಂತಾಗಲು ಗೋದಿ ಮೋಡಿಯಾ ಪ್ರತಿಪಕ್ಷವನ್ನು ದಮನಿಸುವ ಕೆಲಸದಲ್ಲಿ ತೊಡಗಿದೆ ಎನ್ನುವುದು ಸ್ಪಷ್ಟವಾಗಿದೆ.

ಭಾರತ ಜೋಡೋ ಯಾತ್ರೆ 37ದಿನಗಳನ್ನು ಪೂರೈಸಿದೆ. ನರೇಂದ್ರ ಮೋದಿ ಮತ್ತು ಅಮಿತ ಶಾ ಇಷ್ಟೆಲ್ಲ ದಿನಗಳ ಕಾಲ ಪ್ರಯಾಣಿಸಿದ್ದರೆ ನೀವು ಅದ್ಭುತ ಮಾಧ್ಯಮ ಕವರೇಜ್‌ನ್ನು ನೋಡಬಹುದಿತ್ತು. ಇಷ್ಟೆಲ್ಲ ದಿನಗಳ ಪಾದಯಾತ್ರೆಯಿಂದ ಮೋದಿ ಮತ್ತು ಶಾ ಅವರ ಹಿಮ್ಮಡಿಗಳ ಸ್ಥಿತಿ ಏನಾಗಿದೆ ಎನ್ನುವುದನ್ನು ದೇಶಕ್ಕೆ ತಿಳಿಸಲು ಪ್ರತಿಯೊಂದೂ ಚಾನೆಲ್ ಸಂಪಾದಕನ ದರ್ಜೆಯ ಆ್ಯಂಕರ್‌ನ್ನು ಕಳುಹಿಸುತ್ತಿತ್ತು. ಆಗ ರಾಮದೇವ್ ಬಂದಿದ್ದರೆ ಅವರು ಹಿಮ್ಮಡಿ ನೋವಿಗೆ ಆಯುರ್ವೇದ ಪರಿಹಾರಗಳನ್ನು ಸೂಚಿಸುತ್ತಿದ್ದರು. ಆಗ ಹಿಮ್ಮಡಿಗಳ ತಪಾಸಣೆಗಾಗಿ ಏಮ್ಸ್ ದಿಲ್ಲಿಯ ವೈದ್ಯರ ತಂಡವೊಂದು ಸ್ಥಳಕ್ಕೆ ತೆರಳಲಿದೆ ಎಂಬ ಸುದ್ದಿ ಬರುತ್ತಿತ್ತು. ಮೋದಿ ಮತ್ತು ಶಾ ಅವರು ಇಂದು ಏನು ತಿಂದಿದ್ದರು ಎನ್ನುವುದು ಟಿವಿಗಳಲ್ಲಿ ಚರ್ಚೆಯಾಗುತ್ತಿತ್ತು ಮತ್ತು ಇಂತಹ ಯಾತ್ರೆಗಳಿಗೆ ಎಷ್ಟು ಕ್ಯಾಲರಿಗಳ ಅಗತ್ಯವಿದೆ ಎನ್ನುವುದನ್ನು ಟಿವಿಗಳಲ್ಲಿ ಆಹಾರ ವಿಜ್ಞಾನಿಗಳು ಹೇಳುತ್ತಿದ್ದರು. ಯಾತ್ರೆಯು ಸಾವಿರಾರು ಕಿ.ಮೀ.ಗಳದ್ದಾಗಿದ್ದರೆ ಪ್ರತಿ ಸಾವಿರ ಕಿ.ಮೀ.ಪೂರ್ಣಗೊಂಡಾಗ ಅದು ಟಿವಿ ಪರದೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ರಾರಾಜಿಸುತ್ತಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News