ಆಗಂತುಕನಿಂದ ಸಾವಿಗೀಡಾದ ಚೆನ್ನೈ ವಿದ್ಯಾರ್ಥಿನಿಯ ತಂದೆ ಆತ್ಮಹತ್ಯೆ
ಚೆನ್ನೈ: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ, ಆಕೆಯನ್ನು ಚಲಿಸುವ ರೈಲಿನತ್ತ ತಳ್ಳಿ ಸಾಯಿಸಿದ ಬೆನ್ನಲ್ಲೇ, ಮೃತ ವಿದ್ಯಾರ್ಥಿನಿಯ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಶಂಕಿತ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ವ್ಯಕ್ತಿಯ ಅಟಾಪ್ಸಿ ವರದಿಗೆ ಕಾಯಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿ ಹಾಗೂ ಆಕೆಯ ತಂದೆ ವಾಸಿಸುತ್ತಿದ್ದ ಪ್ರದೇಶದ ಸುತ್ತಮುತ್ತಲ ಮಂದಿ ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ತಮಿಳುನಾಡು ಪೊಲೀಸರು ಈಗಾಗಲೇ ಅಪರಾಧ ತನಿಖೆ ವಿಭಾಗದ ಅಪರಾಧ ಶಾಖೆ (ಸಿಬಿ-ಸಿಐಡಿ)ಗೆ ಒಪ್ಪಿಸಿದ್ದಾರೆ.
ಯುವತಿಯ ಕುಟುಂಬಕ್ಕೆ ಸಾಂತ್ವನ ಹೇಳಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Chief Minister MK Stalin) "ಯಾವುದೇ ಮಹಿಳೆಗೆ ಇಂಥ ಪರಿಸ್ಥಿತಿ ಬರದಂತೆ ಖಾತರಿಪಡಿಸುವುದು ನಮ್ಮೆಲ್ಲರ ಸಂಘಟಿತ ಜವಾಬ್ದಾರಿ. ಕಾಲೇಜು ವಿದ್ಯಾರ್ಥಿನಿಯ ದುರಂತ ಹತ್ಯೆ ಬಗ್ಗೆ ತೀವ್ರ ಆಘಾತವಾಗಿದೆ" ಎಂದು ಹೇಳಿದ್ದಾರೆ.
ಹುಡುಗ ಆಗಿರಲಿ, ಹುಡುಗಿಯಾಗಿರಲಿ, ಸಮಾಜದ ಬಗ್ಗೆ ಕಳಕಳಿ ಇರುವಂತೆ ಹಾಗೂ ಇನ್ನೊಬ್ಬರನ್ನು ರಕ್ಷಿಸುವ ಹಾಗೂ ಗೌರವಿಸುವ ರೀತಿಯಲ್ಲಿ ಅವರನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿನಿಯನ್ನು ಚಲಿಸುವ ರೈಲಿನತ್ತ ತಳ್ಳಿದ ವ್ಯಕ್ತಿ ಆಕೆಗೆ ಪ್ರೇಮ ನಿವೇದನೆ ಮಾಡಿರುವ ಸಾಧ್ಯತೆ ಇದ್ದು, ಆಕೆ ತಿರಸ್ಕರಿಸಿದ್ದರಿಂದ ಆಕೆಯನ್ನು ಕೊಲ್ಲುವ ಸಂಚು ರೂಪಿಸಿರಬೇಕು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.