ದಿಲ್ಲಿ ಅಬಕಾರಿ ನೀತಿ ಪ್ರಕರಣ ಮನೀಶ್ ಸಿಸೋಡಿಯಾಗೆ ಸಿಬಿಐ ಸಮನ್ಸ್

Update: 2022-10-16 16:00 GMT
ಮನೀಶ್ ಸಿಸೋಡಿಯಾ, Photo:PTI

ಹೊಸದಿಲ್ಲಿ, ಅ. 16: ಆಮ್ ಆದ್ಮಿ ಪಕ್ಷದ ದಿಲ್ಲಿ ಸರಕಾರದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ರವಿವಾರ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಹೊಸದಿಲ್ಲಿಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಪೂರ್ವಾಹ್ನ ೧೧ ಗಂಟೆಗೆ ಹಾಜರಾಗುವಂತೆ ಸಿಬಿಐ ಸಿಸೋಡಿಯಾ ಅವರಿಗೆ ಸೂಚಿಸಿದೆ. ಅಬಕಾರಿ ನೀತಿ (ಈಗ ರದ್ದುಪಡಿಸಲಾಗಿದೆ)ಯಲ್ಲಿ ಅಕ್ರಮದ ಆರೋಪಕ್ಕೆ ಸಂಬಂಧಿಸಿ ಸಿಬಿಐ ಆಗಸ್ಟ್ ೧೭ರಂದು ಸಿಸೋಡಿಯಾ ಹಾಗೂ ಇತರ ೧೪ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಿಬಿಐ ಆಗಸ್ಟ್ ೩೦ರಂದು ಸಿಸೋಡಿಯಾ ಹಾಗೂ ಇತರ ಆರೋಪಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿತ್ತು.

ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಿಸಲಾದ ಪ್ರಥಮ ಮಾಹಿತಿ ವರದಿ ನಕಲಿ ಎಂದು ಸಿಸೋಡಿಯಾ ಪ್ರತಿಪಾದಿಸಿದ್ದಾರೆ. ಬಿಜೆಪಿಗೆ ಸೇರಿದರೆ ತನ್ನ ವಿರುದ್ಧದ ಎಲ್ಲ ಪ್ರಕರಣಗಳನ್ನು ರದ್ದುಗೊಳಿಸಲಾಗುವುದು ಎಂದು ಬಿಜೆಪಿ ಆಮಿಷ ಒಡ್ಡಿತ್ತು ಎಂದು ಸಿಸೋಡಿಯಾ ಆರೋಪಿಸಿದ್ದಾರೆ.

ಸಿಬಿಐ ರವಿವಾರ ಸಮನ್ಸ್ ಜಾರಿಗೊಳಿಸಿದ ಕೂಡಲೇ ಸಿಸೋಡಿಯಾ ಅವರು, ತಾನು ಸಿಬಿಐ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ.

‘‘ಸಿಬಿಐ  ಅಧಿಕಾರಿಗಳು ನನ್ನ  ನಿವಾಸದ ಮೇಲೆ  ದಾಳಿ ನಡೆಸಿ ೧೪ ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರು. ಆದರೆ, ಇದರಿಂದ ಅವರಿಗೆ  ಏನನ್ನೂ ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ’’ ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ. ‘‘ಅವರು ನನ್ನ ಬ್ಯಾಂಕ್ ಲಾಕರ್ ಅನ್ನು ಕೂಡ ಶೋಧಿಸಿದರು. ಆದರೆ ಏನೂ ಸಿಗಲಿಲ್ಲ. ನನ್ನ ಗ್ರಾಮದಲ್ಲಿ ಕೂಡ ಅವರಿಗೆ ಏನೂ ಸಿಗಲಿಲ್ಲ’’ ಎಂದು ಸಿಸೋಡಿಯಾ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News