ಉತ್ತರ ಪ್ರದೇಶ: ಮುಸ್ಲಿಮರನ್ನು ಹೆದರಿಸಲು ಗುಂಪಿನಿಂದ ಸಮುದಾಯದ ವ್ಯಕ್ತಿಯ ಹತ್ಯೆ

Update: 2022-10-16 14:35 GMT
Photo: Thewire.in

ಹೊಸದಿಲ್ಲಿ,ಅ.16: ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯ ವಿನಯಪುರ ಗ್ರಾಮದಲ್ಲಿ ಸೆ.2ರಂದು ತಡರಾತ್ರಿ ಗುಂಪೊಂದು ದೊಣ್ಣೆಗಳು ಮತ್ತು ಹರಿತ ಆಯುಧಗಳಿಂದ ದಾಳಿ ನಡೆಸಿ ಮುಸ್ಲಿಂ ವ್ಯಕ್ತಿಯೋರ್ವನನ್ನು ಹತ್ಯೆಗೈದ ಪ್ರಕರಣದಲ್ಲಿ ಈವರೆಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ದಾಳಿಯು ಸುಖಾಸುಮ್ಮನೆ ನಡೆದಿರಲಿಲ್ಲ,ಮುಸ್ಲಿಮರಲ್ಲಿ ಭೀತಿಯನ್ನು ಹುಟ್ಟಿಸುವ ಉದ್ದೇಶದಿಂದ ಹತ್ಯೆ ನಡೆದಿದೆ ಎಂದು ಕೊಲೆಯಾಗಿರುವ ದಾವೂದ್ ಅಲಿ ತ್ಯಾಗಿ (50)ಯ ಕುಟುಂಬವು ಪ್ರತಿಪಾದಿಸಿದೆ. ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ. ತ್ಯಾಗಿ ಪತ್ನಿ ಮತ್ತು ಪುತ್ರಿಯೊಂದಿಗೆ ವಿನಯಪುರದಲ್ಲಿ ವಾಸವಾಗಿದ್ದರು. ಅವರ ಮೂವರು ಪುತ್ರರು ದಿಲ್ಲಿಯಲ್ಲಿ ಓದುತ್ತಿದ್ದಾರೆ.

ತನ್ನ ತಂದೆ ಮನೆಯ ವರಾಂಡಾದಲ್ಲಿ ಸಂಬಂಧಿಗಳ ಜೊತೆ ಹರಟುತ್ತಿದ್ದಾಗ ರಾತ್ರಿ 10 ಗಂಟೆಯ ಸುಮಾರಿಗೆ ಏಳೆಂಟು ಬೈಕ್ಗಳಲ್ಲಿ ಬಂದಿದ್ದ 22 ಜನರ ಗುಂಪು ‘ಜೈ ಶ್ರೀರಾಮ’ ಘೋಷಣೆಗಳನ್ನು ಕೂಗುತ್ತ ಅವರ ಮೇಲೆ ಹಲ್ಲೆ ನಡೆಸಿತ್ತು. ನನ್ನ ಸೋದರ ಸಂಬಂಧಿಗಳ ಮೇಲೂ ಗುಂಪು ಗುಂಡು ಹಾರಿಸಿತ್ತಾದರೂ ಅವರು ಅಪಾಯದಿಂದ ಪಾರಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ತಂದೆಯನ್ನು ಮೀರತ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬೆಳಗಿನ ಜಾವ ಅವರು ಕೊನೆಯುಸಿರೆಳೆದಿದ್ದರು ಎಂದು ತ್ಯಾಗಿಯವರ ಪುತ್ರ ಶಾರೂಖ್ ತಿಳಿಸಿದರು.

ಸೆ.3ರಂದು ಖೇಕ್ರಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆದರೆ ಎಫ್ಐಆರ್ನಲ್ಲಿ ದುಷ್ಕರ್ಮಿಗಳ ಗುಂಪು ಜೈ ಶ್ರೀರಾಮ ಘೋಷಣೆಗಳನ್ನು ಕೂಗಿದ್ದನ್ನು ಉಲ್ಲೇಖಿಸಲಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಕ್ಕಿ ಅಲಿಯಾಸ್ ವಿಕ್ಕಿ,ಹರೀಶ,ಮೋಹಿತ್ ಮತ್ತು ದಿಲೀಪ ಎನ್ನುವವರನ್ನು ಬಂಧಿಸಿರುವ ಪೊಲೀಸರು ಎರಡು ಬೈಕ್ಗಳು ಮತ್ತು ಹತ್ಯೆಗೆ ಬಳಸಿದ್ದ ಎರಡು ದೊಣ್ಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಗೋಟ್ ಮತ್ತು ವಿನಯಪುರದ ನಿವಾಸಿಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿತ್ತು ಮತ್ತು ಬಂಧಿತ ಆರೋಪಿಗಳು ವಿನಯಪುರದ ಯಾರೇ ಸಿಕ್ಕಿದರೂ ದಾಳಿ ನಡೆಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಹತ್ಯೆ ನಡೆದು ಒಂದು ತಿಂಗಳಾದರೂ ತನಿಖೆಯು ಆಮೆಗತಿಯಲ್ಲಿ ಸಾಗಿದೆ ಮತ್ತು ಹೆಚ್ಚಿನ ಆರೋಪಿಗಳು ಹಾಯಾಗಿ ಓಡಾಡಿಕೊಂಡಿದ್ದಾರೆ, ಹೀಗಾಗಿ ನಾವು ಭಯದಲ್ಲಿ ಬದುಕುತ್ತಿದ್ದೇವೆ ’ ಎಂದು ಕುಟುಂಬ ಸದಸ್ಯರು ತಿಳಿಸಿದರು. ತ್ಯಾಗಿ ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ಉದ್ಯೋಗವನ್ನು ನೀಡುವ ಭರವಸೆಯೂ ಈವರೆಗೆ ಈಡೇರಿಲ್ಲ.

ಮೂರು ದಿನಗಳ ಹಿಂದೆ ತನ್ನ ಸೋದರ ಮತ್ತು ಚಿಕ್ಕಪ್ಪ ಹೊಲಕ್ಕೆ ತೆರಳಿದ್ದ ಸಂದರ್ಭ ದುಷ್ಕರ್ಮಿಗಳು ಅವರನ್ನು ಸುತ್ತುವರಿದು ಬೆದರಿಕೆಯೊಡ್ಡಿದ್ದಾರೆ ಎಂದು ಶಾರೂಖ್ ಆರೋಪಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ತನ್ನ ತಂದೆಯನ್ನು ಹತ್ಯೆಗೈದ ಗುಂಪಿನಲ್ಲಿದ್ದವರ ಹೆಸರುಗಳನ್ನು ಪೊಲೀಸರಿಗೆ ನೀಡಿದ್ದು,ಅವರೆಲ್ಲ ಬಿಜೆಪಿ ಸದಸ್ಯರಾಗಿದ್ದಾರೆ. ಪೊಲೀಸರು ಒಂದೆರಡು ಸಲ ಅವರ ಮನೆಗೆ ಭೇಟಿ ನೀಡಿದ್ದರಾದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಶಾರೂಖ್ ಆರೋಪಿಸಿದರು.

ತ್ಯಾಗಿಯವರ ಹತ್ಯೆಗೆ ಮುನ್ನ ಬಾಗೋಟ್ನ ದೇವಸ್ಥಾನವೊಂದರಲ್ಲಿ ಸಭೆಯೊಂದು ನಡೆದಿದ್ದು,ಪ್ರದೇಶದಲ್ಲಿಯ ಮುಸ್ಲಿಮರಲ್ಲಿ ಭೀತಿಯನ್ನು ಹುಟ್ಟಿಸಲು ಸಂಚು ರೂಪಿಸಲಾಗಿತ್ತು ಎಂದು ಅವರ ಕುಟುಂಬ ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.

ಕೆಲವರು ಅಗ್ಗದ ಜನಪ್ರಿಯತೆಯನ್ನು ಬಯಸಿದ್ದರು ಮತ್ತು ಇದೇ ಕಾರಣಕ್ಕಾಗಿ ತ್ಯಾಗಿಯವರ ಮೇಲೆ ದಾಳಿ ನಡೆದಿತ್ತು. ಬಾಗೋಟ್ನ ಸಭೆಯಲ್ಲಿ ಮುಸ್ಲಿಮರಲ್ಲಿ ಭೀತಿಯನ್ನು ಸೃಷ್ಟಿಸಲು ಸಂಚು ರೂಪಿಸಲಾಗಿತ್ತು. ಆದರೆ ಲೂಟಿ ಅಥವಾ ಹತ್ಯೆ ನಡೆಸಬಾರದು ಎಂದು ಸೂಚನೆ ನೀಡಲಾಗಿತ್ತು. ಗುಂಪು ಗ್ರಾಮವನ್ನು ಪ್ರವೇಶಿಸಿದಾಗ ಮೊದಲು ತ್ಯಾಗಿ ಮೇಲೆ ದಾಳಿ ನಡೆಸಿ ಬಳಿಕ ಅಲ್ಲಿಂದ ಪರಾರಿಯಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ದೇವೇಂದ್ರ ಧಾಮಾ ಹೇಳಿದರು.

ಬಂಧಿತರಲ್ಲೋರ್ವನಾದ ದಿಲೀಪ್ ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿಗೆ ಪ್ರಚೋದನೆ ನೀಡುವ ಪೋಸ್ಟ್ಗಳನ್ನು ಮಾಡಿದ್ದ ಎಂದು ಬಿಬಿಸಿ ತನ್ನ ವರದಿಯಲ್ಲಿ ತಿಳಿಸಿದೆ.
ಬಾಗೋಟ್ ಸಭೆಯು ರಾಜಕೀಯ ಪ್ರೇರಿತವಾಗಿತ್ತು ಎನ್ನುವುದನ್ನು ಪೊಲೀಸರು ನಿರಾಕರಿಸಿದ್ದಾರೆ. ಶಾರೂಖ್ ಮತ್ತು ಕುಟುಂಬಕ್ಕೆ ಪೊಲೀಸರು ರಕ್ಷಣೆಯನ್ನು ಒದಗಿಸಿದ್ದಾರಾದರೂ ಅವರು ಭೀತಿಯಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ. ವಿನಯಪುರ ನಿವಾಸಿಗಳು ಗುರ್ಜರ್ಗಳು ಮತ್ತು ಮುಸ್ಲಿಂ ಸಮುದಾಯಗಳಿಗೆ ಸೇರಿದ್ದು,ಸುತ್ತಲಿನ ಗ್ರಾಮಗಳಲ್ಲಿ ಗುರ್ಜರ್ಗಳು ಪ್ರಾಬಲ್ಯ ಹೊಂದಿದ್ದಾರೆ.

ಪ್ರದೇಶದಲ್ಲಿ ಉದ್ವಿಗ್ನತೆ ಮನೆಮಾಡಿರುವುದರಿಂದ ತ್ಯಾಗಿ ಕುಟುಂಬವು ಗ್ರಾಮದಿಂದ ಹೊರಗೆ ಸ್ಥಳಾಂತರಗೊಳ್ಳಲು ಬಯಸಿದೆ. ‘ನಾವು ಆಡಳಿತದ ಮೇಲೆ ಕುರುಡು ನಂಬಿಕೆಯನ್ನಿರಿಸಿದ್ದೆವು,ಆದರೆ ಕುಟುಂಬಕ್ಕೆ ಸರಕಾರಿ ಉದ್ಯೋಗದ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ನಾವು ಇನ್ನೂ ಓದುತ್ತಿರುವುದರಿಂದ ತಂದೆಯ ಅಲ್ಪ ಆದಾಯವನ್ನೇ ಅವಲಂಬಿಸಿದ್ದೆವು. ನಮಗೆ ಹೊಲದಲ್ಲಿ ನೇಗಿಲು ಹೇಗೆ ಹಿಡಿಯಬೇಕು ಎನ್ನುವುದೂ ಗೊತ್ತಿಲ್ಲ ’ ಎಂದು ಶಾರೂಖ್ ಹೇಳಿದರು.

ಕೃಪೆ: Thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News