ಕಾನೂನಿನೊಂದಿಗೆ ವ್ಯವಹರಿಸುವಾಗ ಸ್ತ್ರೀವಾದಿ ಚಿಂತನೆಯನ್ನು ಮೈಗೂಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ನ್ಯಾ.ಚಂದ್ರಚೂಡ ಸಲಹೆ

Update: 2022-10-16 15:14 GMT
ನ್ಯಾ.ಚಂದ್ರಚೂಡ

ಹೊಸದಿಲ್ಲಿ,ಅ.16: ತಮ್ಮ ವೃತ್ತಿಜೀವನದಲ್ಲಿ ಸ್ತ್ರೀವಾದಿ ಧೋರಣೆಯನ್ನು ಮೈಗೂಡಿಸಿಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಡಿ.ವೈ.ಚಂದ್ರಚೂಡ ಅವರು ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಶನಿವಾರ ದಿಲ್ಲಿಯ ರಾಷ್ಟ್ರೀಯ ಕಾನೂನು ವಿವಿಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು,‘ಆರಂಭದಲ್ಲಿ ಮಹಿಳೆಯರು ಅತ್ಯಂತ ಹೇಯ ಅಪರಾಧಗಳಿಗೆ ಮತ್ತು ಉಲ್ಲಂಘನೆಗಳಿಗೆ ಒಳಗಾಗಿದ್ದ ವಿಷಯಗಳನ್ನು ನಾನು ಸೀಮಿತ ದೃಷ್ಟಿಕೋನದಿಂದ ನೋಡುತ್ತಿದ್ದೆ. ಆದರೆ ಲಿಂಗ ವಾಸ್ತವತೆಗಳ ಕುರಿತು ಹೆಚ್ಚು ತಿಳಿದುಕೊಂಡಿದ್ದ ಮಹಿಳಾ ಸಹೋದ್ಯೋಗಿಯೊಂದಿಗೆ ಪೀಠದಲ್ಲಿ ಕಾರ್ಯವನ್ನು ನಿರ್ವಹಿಸಿದ್ದು ನನಗೆ ಅಗತ್ಯ ಸ್ತ್ರೀವಾದಿ ದೃಷ್ಟಿಕೋನವನ್ನು ಒದಗಿಸಿತ್ತು ’ಎಂದು ಹೇಳಿದರು.

ಪುರುಷರ ಪ್ರಾಬಲ್ಯವಿರುವ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುವುದು ಮಹಿಳಾ ನ್ಯಾಯವಾದಿಗಳಿಗೆ ಸವಾಲಿನದಾಗಿದೆ ಎನ್ನುವುದನ್ನು ತಾನು ಅರ್ಥ ಮಾಡಿಕೊಂಡಿದ್ದೇನೆ ಎಂದ ನ್ಯಾ.ಚಂದ್ರಚೂಡ,ಆದರೆ ಕಾಲವು ಬದಲಾಗುತ್ತಿದೆ ಮತ್ತು ಯುವಮಹಿಳೆಯರು ಮುಕ್ತವಾಗಿ ವೃತ್ತಿಯನ್ನು ಪ್ರವೇಶಿಸುವಂತೆ ಮಾಡುವಲ್ಲಿ ತಂತ್ರಜ್ಞಾನವು ಹೆಚ್ಚು ಸಮರ್ಥವಾಗಿದೆ ಎಂದರು.

 ‘ಸಾಂಕ್ರಾಮಿಕದ ಸಂದರ್ಭದಲ್ಲಿ ನಾವು ವರ್ಚುವಲ್ ವಿಚಾರಣೆಗಳನ್ನು ನಡೆಸುತ್ತಿದ್ದಾಗ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯವಾದಿಗಳ ಉಪಸ್ಥಿತಿಯಲ್ಲಿ ನಾಟಕೀಯ ಏರಿಕೆಯಾಗಿತ್ತು. ತಮ್ಮ ಸುತ್ತಲು ಹೆಚ್ಚಿನ ಪುರುಷರಿಂದಾಗಿ ಹಿಂಜರಿಯುವ ಬದಲು ಮುಕ್ತವಾಗಿ ನ್ಯಾಯಾಲಯವನ್ನುದ್ದೇಶಿಸಿ ಮಾತನಾಡಲು ಅವರಿಗೆ ಸಾಧ್ಯವಾಗಿತ್ತು. ಇದು ಸಾಂಕ್ರಾಮಿಕವು ನಮಗೆ ಕಲಿಸಿದ್ದ ದೊಡ್ಡ ಪಾಠವಾಗಿತ್ತು ’ ಎಂದರು.

ಜನರ ದೈನಂದಿನ ಬದುಕುಗಳನ್ನು ಕೇಂದ್ರವಾಗಿಸಿಕೊಳ್ಳುವ ಕಾನೂನು ಧೋರಣೆಯನ್ನು ಅಳವಡಿಸಿಕೊಳ್ಳುವಂತೆಯೂ ನ್ಯಾ.ಚಂದ್ರಚೂಡ ವಿದ್ಯಾರ್ಥಿಗಳನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News