ಘರ್ಷಣೆಯಲ್ಲಿ ಯುವಕ ಸಾವು; ಕೋಮು ಆಯಾಮ ನೀಡಲು ಪ್ರಯತ್ನಪಟ್ಟ ಹಿಂದುತ್ವವಾದಿಗಳು

Update: 2022-10-16 16:14 GMT
Photo: twitter/Ndtv

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ 27 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಜಗಳದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೊಣ್ಣೆ ಮತ್ತು ರಾಡ್‌ಗಳಿಂದ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ನಿತೇಶ್ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆತನ ಇಬ್ಬರು ಗೆಳೆಯರೂ ಗಾಯಗೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಘಟನೆಗೆ ಕೋಮುವಾದದ ಆಯಾಮ ನೀಡಲು ಪ್ರಯತ್ನ ಪಟ್ಟಿದ್ದು, ಮೃತ ಯುವಕ ಬಜರಂಗದಳದೊಂದಿಗೆ ಸಂಬಂಧ ಹೊಂದಿದ್ದು, ಆರೋಪಿಗಳ ಮುಸ್ಲಿಂ ಸಮುದಾಯದವರು ಎಂದು ಆರೋಪಿಸಲಾಗಿದೆ. ಆದರೆ, ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆದಿದ್ದು, ಯಾವುದೇ ಕೋಮು ವೈಷಮ್ಯದಿಂದ ನಡೆದಿಲ್ಲ  ಎಂದು ಪೊಲೀಸರು ಹೇಳಿದ್ದಾರೆ.

ಅದಾಗ್ಯೂ, ಹತ್ಯೆ ಖಂಡಿಸಿ ಬಲಪಂಥೀಯ ಕಾರ್ಯಕರ್ತರು ರವಿವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಅಕ್ಟೋಬರ್ 12 ರಂದು, ನಿತೇಶ್ ತನ್ನ ಸ್ನೇಹಿತರಾದ ಮಾಂಟಿ ಮತ್ತು ಅಲೋಕ್ ಅವರೊಂದಿಗೆ ತನ್ನ ಮನೆಯ ಬಳಿ ನಿಂತಿದ್ದಾಗ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಹುಡುಗರಾದ ಉಫಿಜಾ, ಅಬ್ಬಾಸ್ ಮತ್ತು ಅದ್ನಾನ್ ಅವರೊಂದಿಗೆ ಜಗಳಕ್ಕೆ ನಿಂತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಶ್ವೇತಾ ಚೌಹಾಣ್ ಹೇಳಿದ್ದಾರೆ.  

ಪೊಲೀಸರ ಪ್ರಕಾರ ನಿತೇಶ್ ಮತ್ತು ಅಲೋಕ್ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದವು. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ನಿತೇಶ್ ಮತ್ತು ಅವನ ಸ್ನೇಹಿತರು ಇನ್ನೊಂದು ಗುಂಪಿನ ಮೇಲೆ ಮೊದಲು ದಾಳಿ ಮಾಡುವುದು ಕಂಡು ಬಂದಿದೆ.

"ನಿತೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಶನಿವಾರ ಸಂಜೆ ನಿಧನರಾದರು. ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು" ಎಂದು ಡಿಸಿಪಿ ಚೌಹಾಣ್ ತಿಳಿಸಿದ್ದಾರೆ.

ನಿತೇಶ್ ಇತ್ತೀಚೆಗಷ್ಟೇ ಬಜರಂಗದಳಕ್ಕೆ ಸೇರ್ಪಡೆಗೊಂಡಿದ್ದು, ಅದಕ್ಕಾಗಿಯೇ ಆತ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದಾನೆ ಎಂದು ಬಲಪಂಥೀಯರು ಹೇಳಿಕೊಂಡಿದ್ದಾರೆ. ಪಕ್ಕದ ಮಸೀದಿಯ ಗುಂಪೊಂದು ನಿತೇಶ್‌ನನ್ನು ಥಳಿಸಲು ಬಂದಿತು ಎಂದು ಅವರು ಹೇಳಿದ್ದಾರೆ, ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಸಣ್ಣ ಜಗಳವು ಉಲ್ಬಣಗೊಂಡಿದೆ. ಅದರಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News